ಮಂಗಳೂರು, ಮೇ 03 (Daijiworld News/MSP): ದೇಶದ ಪೂರ್ವ ಕರಾವಳಿ ಪ್ರದೇಶದಲ್ಲಿ ವ್ಯಾಪಿಸಿಕೊಂಡಿರುವ 'ಫನಿ' ಚಂಡಮಾರುತ ಭೀಕರ ಸ್ವರೂಪ ಪಡೆದಿದ್ದು, ಶುಕ್ರವಾರ ಬೆಳಗ್ಗಿನ ಜಾವ ಒಡಿಶಾ ಪ್ರವೇಶಿದೆ. ಈಗಾಗಲೇ ಒಡಿಶಾದ ಕರಾವಳಿ ಪ್ರದೇಶದಲ್ಲಿನ ಸುಮಾರು 8 ಲಕ್ಷ ಮಂದಿಯನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗಿದ್ದು, ‘ಫನಿ’ ಚಂಡಮಾರುತ ತೀವ್ರಗೊಂಡಿರುವುದರಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ. 15 ಜಿಲ್ಲೆಗಳ ತಗ್ಗು ಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗುತ್ತಿದೆ.
ಇನ್ನೊಂದೆಡೆ ಫನಿ ಚಂಡಮಾರುತ ಈಶಾನ್ಯ ದಿಕ್ಕಿನತ್ತ ಸಾಗುತ್ತಿರುವುದರಿಂದ ದಕ್ಷಿಣ ಕರಾವಳಿಯಲ್ಲಿ ಯಾವುದೇ ಆತಂಕ ಇಲ್ಲ ಎನ್ನುವ ಮುನ್ಸೂಚನೆ ಸಿಕ್ಕಿದ್ದು ಈ ಹಿನ್ನಲೆಯಲ್ಲಿ ಉಭಯ ಜಿಲ್ಲೆಗಳಲ್ಲಿ ಮೀನುಗಾರಿಕೆ ನಿರಾತಂಕವಾಗಿ ನಡೆಯುತ್ತಿದೆ. ಆದರೂ ಎಚ್ಚರಿಕೆಯಿಂದಿರಲು ಮೀನುಗಾರರಿಗೆ , ಮೀನುಗಾರಿಕ ಮತ್ತು ಬಂದರು ಇಲಾಖೆ ಸೂಚನೆ ನೀಡಿದೆ.
ಗುರುವಾರ ಗಂಗೊಳ್ಳಿ, ಶಿರೂರು, ಮಲ್ಪೆ , ಹೆಜಮಾಡಿ, ಮಂಗಳೂರು ಸಹಿತ ಎಲ್ಲಾ ಕಡೆಗಳಲ್ಲಿಯೂ ಬೋಟುಗಳು ಮತ್ತು ದೋಣಿಗಳು ಮೀನುಗಾರಿಕೆಗೆ ತೆರಳಿದೆ. ಆದರೆ ಈಗ ಮೀನು ಸಿಗುವ ಪ್ರಮಾಣ ಕಡಿಮೆಯಾಗಿರುವುದರಿಂದ ಹೆಚ್ಚಿನ ಬೋಟುಗಳು ದಡದಲ್ಲಿದೆ.