ಉಡುಪಿ, ಮೇ03(Daijiworld News/SS): ಕಳೆದ ಹಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಲ್ಪೆ ಮೀನುಗಾರರ ಬೋಟ್ ಅವಶೇಷಗಳು ಪತ್ತೆಯಾಗಿದೆ ಎಂಬ ಮಾಹಿತಿ ನೌಕಾಪಡೆಯ ಅಧಿಕಾರಿಗಳಿಂದ ಲಭ್ಯವಾಗಿದೆ.
ಮಹಾರಾಷ್ಟ್ರದ ಮಾಳ್ವಣ್ ಕಡಲ ತೀರದಿಂದ 33 ಕಿ.ಮೀ. ದೂರದ ಸಮುದ್ರದಲ್ಲಿ ಪತ್ತೆಯಾಗಿದ್ದು, ಇದನ್ನು ಭಾರತೀಯ ನೌಕಾ ಸೇನೆಯೇ ಖಚಿತಪಡಿಸಿದೆ.
ಡಿಸೆಂಬರ್ 13ರಂದು ಉಡುಪಿಯ ಮಲ್ಪೆ ಬೀಚ್ನಿಂದ 7 ಜನ ಮೀನುಗಾರರು ಸುವರ್ಣ ತ್ರಿಭುಜ ಬೋಟ್ನಲ್ಲಿ ಮೀನುಗಾರಿಕೆಗೆಂದು ತೆರಳಿದ್ದರು. ಮಹಾರಾಷ್ಟ್ರದ ಸಿಂಧುದುರ್ಗಾ ಜಿಲ್ಲೆ ಸಮೀಪದಿಂದ ಮೀನುಗಾರರ ಸಹಿತ ಬೋಟ್ ನಿಗೂಢವಾಗಿ ಕಾಣೆಯಾಗಿತ್ತು.
ಈ ಹಿಂದೆ ನೌಕಾಪಡೆಯ ಶೋಧ ನೌಕೆಗಳು ಹುಡುಕಾಟ ನಡೆಸಿದ ಸಂದರ್ಭದಲ್ಲಿ ಸಮುದ್ರದಲ್ಲಿ 60 ಮೀಟರ್ ಆಳದಲ್ಲಿ 23 ಮೀಟರ್ ಉದ್ದ ಬೋಟಿನಾಕಾರದ ವಸ್ತು ಪತ್ತೆಯಾಗಿತ್ತು. ಅದು ಸುವರ್ಣ ತ್ರಿಭುಜವಾಗಿರಬಹುದು ಎಂದು ಭಾವಿಸಲಾಗಿತ್ತು. ಆದರೆ ಅದು ಬೋಟಿನ ಅವಶೇಷ ಅಲ್ಲ, ಅದೊಂದು ಬಂಡೆಕಲ್ಲು ಎಂದು ಹೇಳಲಾಗಿತ್ತು.
ಬೋಟ್ ಮತ್ತು ಮೀನುಗಾರರ ಪತ್ತೆಗಾಗಿ ಐಎನ್ಎಸ್ ನಿರೀಕ್ಷಕ್ ಯುದ್ಧನೌಕೆ ಸಹಾಯದಿಂದ ಸೋನಾರ್ ತಂತ್ರಜ್ಞಾನ ಬಳಸಿ ಹುಡುಕಾಟ ನಡೆಸಲಾಗುತ್ತಿತ್ತು. ಇದೀಗ ಮಹಾರಾಷ್ಟ್ರದ ಮಾಲ್ವಾನ್ ಕಡಲ ತೀರದಿಂದ 33 ಕಿ.ಮೀ. ದೂರದಲ್ಲಿ ಸುಮಾರು 60 ಮೀಟರ್ ಆಳದಲ್ಲಿ ಅವಶೇಷಗಳು ಪತ್ತೆಯಾಗಿದೆ ಎಂಬ ಮಾಹಿತಿ ದೊರೆತಿದೆ.
ಮಾಲವಾಣ ಕಡಲ ತೀರದ ಸಮೀಪದಲ್ಲಿ ಬೋಟ್ನ ಅವಶೇಷ ಮೇ 1ರಂದು ಪತ್ತೆಯಾಗಿರುವುದನ್ನು ಭಾರತೀಯ ನೌಕಾ ಸೇನೆಯೇ ಖಚಿತಪಡಿಸಿದೆ. ಮಹಾರಾಷ್ಟ್ರ ಬಳಿಯ ಮಾಲವಾಣದಲ್ಲಿ ಬೋಟ್ ಅವಶೇಷ ಪತ್ತೆಯಾಗಿದೆ ಎಂದು ನೌಕಾದಳದ ವಕ್ತಾರರು ತಿಳಿಸಿದ್ದಾರೆ.
ಕಳೆದ ಡಿಸೆಂಬರ್ ನಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೊಟ್ ನಾಪತ್ತೆಯಾಗಿತ್ತು. ಡಿ.13ರಂದು ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರು ಡಿ.15ರ ರಾತ್ರಿಯಿಂದ ಸಂಪರ್ಕ ಕಡಿದುಕೊಂಡು ಕಣ್ಮರೆಯಾಗಿದ್ದರು. ಸುವರ್ಣ ತ್ರಿಭುಜ ಬೋಟ್ ನಲ್ಲಿ ಏಳು ಮಂದಿ ಮೀನುಗಾರರಿದ್ದರು.