ಮಂಗಳೂರು, ಮೇ 02 (Daijiworld News/SM):ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಡೀಲ್ ಎಂಬಲ್ಲಿರುವ ಅದ್ವೈತ್ ಜೆ.ಸಿ.ಬಿ. ಮತ್ತು ಯುನೈಟೆಡ್ ಟೊಯೋಟಾ ಶೋರೂಮ್ ಗೆ ನುಗ್ಗಿ ಕಳ್ಳತನ ಮಾಡಿದ್ದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮೂಡಬಿದ್ರೆ ಹೊಸಬೆಟ್ಟುವಿನ ಪ್ರಸಾದ್ ಪೂಜಾರಿ(23) ಬಂಧಿತ ಆರೋಪಿಯಾಗಿದ್ದಾನೆ.
ಆರೋಪಿಯನ್ನು ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಣ್ಣೂರು ಜಂಕ್ಷನ್ ನಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿ ಪ್ರಸಾದ್ ಪೂಜಾರಿ ಎಂಬಾತನ ವಿರುದ್ಧ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಕೊಲೆ ಯತ್ನ ಸೇರಿದಂತೆ 3 ಪ್ರಕರಣಗಳು ದಾಖಲಾಗಿದ್ದು, 2014 ನೇ ಸಾಲಿನಲ್ಲಿ ಆರೋಪಿಗೆ ರಾತ್ರಿ ಕನ್ನ ಕಳವು ಪ್ರಕರಣದಲ್ಲಿ ಶಿಕ್ಷೆಯಾಗಿತ್ತು. ವೇಣೂರು ಪೊಲೀಸ್ ಠಾಣೆಯಲ್ಲಿ ರಾತ್ರಿ ಕನ್ನ ಕಳವು ಪ್ರಕರಣವು ದಾಖಲಾಗಿತ್ತು. ಮತ್ತು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದರೋಡೆ ಯತ್ನದಂತಹ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಪ್ರಸ್ತುತ ಆರೋಪಿ ಪ್ರಸಾದ್ ಪೂಜಾರಿ ಎಂಬಾತನನ್ನು ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳೂರು ರೈಲ್ವೆ ಜಂಕ್ಷನ್ ಬಳಿಯಿರುವ ರೈಲ್ವೆ ವಸತಿ ಗೃಹಕ್ಕೆ ನುಗ್ಗಿ ನಡೆಸಿದ ರಾತ್ರಿ ಕನ್ನ ಕಳವು ಪ್ರಕರಣ, ಪಡೀಲ್ ಎಂಬಲ್ಲಿರುವ ಅದ್ವೈತ್ ಜೆ.ಸಿ.ಬಿ. ಶೋರೂಮ್ ಗೆ ನುಗ್ಗಿ ನಡೆಸಿದ ರಾತ್ರಿ ಕನ್ನ ಕಳವು ಪ್ರಕರಣ, ಪಡೀಲ್ ಎಂಬಲ್ಲಿರುವ ಯುನೈಟೆಡ್ ಟೊಯೋಟಾ ಶೋರೂಮ್ ಗೆ ನುಗ್ಗಿ ನಡೆಸಿದ ರಾತ್ರಿ ಕಳವು ಪ್ರಕರಣ, ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 02 ಅಂಗಡಿಗಳಿಗೆ ನುಗ್ಗಿ ನಡೆಸಿದ ರಾತ್ರಿ ಕಳವು ಒಟ್ಟು 02 ಪ್ರಕರಣ, ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಎಡಪದವು ಪಂಚಾಯತ್ ಕಚೇರಿಗೆ ನುಗ್ಗಿ ನಡೆಸಿದ ಕಳವು ಪ್ರಕರಣ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಾರಿಪಳ್ಳ ಎಂಬಲ್ಲಿರುವ ಚೌಟಾಸ್ ಗ್ಯಾಸ್ ಏಜೆನ್ಸಿಗೆ ನುಗ್ಗಿ ನಡೆಸಿದ ರಾತ್ರಿ ಕನ್ನ ಕಳವು ಪ್ರಕರಣಗಳು ಸೇರಿದಂತೆ ಒಟ್ಟು 7 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಬಂಧಿಸಲಾಗಿದೆ.
ಆರೋಪಿ ಪ್ರಸಾದ್ ಪೂಜಾರಿಯಿಂದ 3 ಲ್ಯಾಪ್ ಟಾಪ್, 4 ಟ್ಯಾಬ್,3 ಮೊಬೈಲ್,2 ಚಿನ್ನದ ಬಳೆಗಳು, ಕ್ಯಾಶ್ ಲಾಕರ್, 1 ಕ್ಯಾಮೆರಾ ಹಾಗೂ ಕೃತ್ಯ ನಡೆಸಲು ಉಪಯೋಗಿಸಿದ ಲಿವರ್, ಟಾರ್ಚ್, ಮಾಸ್ಕ್ ಹಾಗೂ ಕಬ್ಬಿಣದ ರಾಡ್ ನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕಳವು ಗೈದ ಸೊತ್ತುಗಳ ಒಟ್ಟು ಮೌಲ್ಯ ರೂ. 1,87,000 ರೂಪಾಯಿ ಎಂದು ಅಂದಾಜಿಸಲಾಗಿದೆ.