ಬ್ರಹ್ಮಾವರ, ಮೇ 02 (Daijiworld News/MSP): ಇಲ್ಲಿನ ಸ್ಥಳೀಯ ವೈದ್ಯರೊಬ್ಬರಿಗೆ, ತಾನು ವೈದ್ಯೆ ಎಂದು ಫೇಸ್ಬುಕ್ ಮೂಲಕ ಸ್ನೇಹ ಬೆಳೆಸಿ ಯುವತಿಯೊಬ್ಬಳು ಸರಿಸುಮಾರು 2 ಲಕ್ಷ ಪಂಗನಾಮ ಹಾಕಿದ ಘಟನೆ ವರದಿಯಾಗಿದೆ.
ಬ್ರಹ್ಮಾವರದ ಹಂದಾಡಿ ಗ್ರಾಮದ ನಿವಾಸಿ ಡಾ. ಪ್ರವೀಣ್ ಕುಮಾರ್ ಫೇಸ್ಬುಕ್ ಸ್ನೇಹಿತೆಯಿಂದ ವಂಚನೆಗೆ ಒಳಗಾದವರು. ದೂರು ದಾಖಲಿಸಿಕೊಂಡಿರುವ ಉಡುಪಿಯ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು, ತನಿಖೆ ಆರಂಭಿಸಿದ್ದಾರೆ.
ಏನಿದು ಘಟನೆ
ಬ್ರಹ್ಮಾವರದ ಹಂದಾಡಿ ಗ್ರಾಮದ ವೈದ್ಯ ಡಾ|ಪ್ರವೀಣ್ ಕುಮಾರ್ ಎಂಬವರ ಫೇಸ್ ಬುಕ್ ಖಾತೆಗೆ ಲಂಡನ್ ನ ಕಮಿಲ್ಲಾ ಗಂಪಿ ಎಂಬ ಹೆಸರಿನಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ತನ್ನನ್ನು ತಾನು ವೈದ್ಯೆ ಎಂದು ಪರಿಚಯಿಸಿಕೊಂಡ ಕಾರಣಕ್ಕೆ ಪ್ರವೀಣ್ ಒಪ್ಪಿಗೆ ಸೂಚಿಸಿದ್ದರು. ಕೆಲವು ದಿನಗಳ ಬಳಿಕ ಅವರಿಬ್ಬರು ಫೇಸ್ಬುಕ್ನಲ್ಲಿ ಚಾಟ್ ಮಾಡಲು ಆರಂಭಿಸಿದ್ದರು.
ಆದರೆ ಏಪ್ರಿಲ್ 30 ರಂದು ಸುಮಾರು 11.08 ಕ್ಕೆ ಪ್ರವೀಣ್ ಗೆ ಕರೆ ಮಾಡಿದ ಕಮಿಲ್ಲಾ ಗಂಪಿ ಸಹಾಯಕ್ಕಾಗಿ ಗೋಗರೆದು, ತಾನು ದೆಹಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ'ದಲ್ಲಿ ಇದ್ದೇನೆ. ನಾನು ಕಸ್ಟಮ್ಸ್ ಅಧಿಕಾರಿಗಳಿಂದ ತೊಂದರೆಗೆ ಒಳಪಟ್ಟಿದ್ದು, ಇದನ್ನು ಸರಿಪಡಿಸಲು ರೂಪಾಯಿ 2 ಲಕ್ಷದ ಅವಶ್ಯಕತೆ ಇದ್ದು, ತನ್ನಲ್ಲಿ ಪೌಂಡ್ಸ್ ಇದ್ದು, ಅದನ್ನು ಅವರು ಸ್ವೀಕರಿಸದೇ ಇರುವ ಕಾರಣ ಅಗತ್ಯವಾಗಿ ಭಾರತೀಯ ರೂಪಾಯಿ 2 ಲಕ್ಷ ಕಳುಹಿಸಿ ಕೊಡುವಂತೆ ವಿನಂತಿಸಿಕೊಂಡು ಐಸಿಐಸಿಐ ಬ್ಯಾಕ್ ಖಾತೆ ನಂಬರ್ ನೀಡಿದ್ದು ಇದನ್ನು ನಂಬಿ ರೂಪಾಯಿ 50 ಸಾವಿರವನ್ನು ಸಿಂಡಿಕೇಟ್ ಬ್ಯಾಂಕ್ ಮೊಬೈಲ್ ಆ್ಯಪ್ನಿಂದ ಕಳುಹಿಸಿದ ಪ್ರವೀಣ್ ಕುಮಾರ್ ಬಾಕಿ ಉಳಿದ ರೂಪಾಯಿ 1,45,700/- ನ್ನು ಆರ್ಟಿಜಿಎಸ್ ಮುಖಾಂತರ ವರ್ಗಾಯಿಸಿದ್ದಾರೆ.
ಆದರೆ ಹಣ ವರ್ಗಾವಣೆಯ ಬಳಿಕ ಪ್ರವೀಣ ಕುಮಾರ್ ರವರು ತಾನು ಕಮಿಲ್ಲಾ ಗಂಪಿ ಎಂಬಾಕೆಯಿಂದ ಮೋಸ ಹೋಗಿ ಒಟ್ಟು ರೂಪಾಯಿ 1,95,700/- ಕಳೆದುಕೊಂಡಿರುವುದು ಮನವರಿಕೆಯಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.