ಮಂಗಳೂರು, ಏ. 14(DaijiworldNews/AA): ಲೋಕಸಭಾ ಚುನಾವಣೆ ಹಿನ್ನಲೆ ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ, ಮಂಗಳೂರಿನಲ್ಲಿ ಇಂದು ರೋಡ್ ಶೋ ಮೂಲಕ ಚುನಾವಣಾ ಪ್ರಚಾರ ಪ್ರಾರಂಭಿಸಿದ್ದಾರೆ.
ನಾರಾಯಣಗುರು ವೃತ್ತದಿಂದ ಅಲಂಕೃತ ವಿಶೇಷ ವಾಹನವನ್ನೇರಿ ರೋಡ್ ಶೋ ಆರಂಭಿಸಿದ ಮೋದಿ ಅವರು ನವಭಾರತ ವೃತ್ತದವರೆಗೆ ಅಂದರೆ ಸುಮಾರು 2 ಕಿ.ಮೀ. ರೋಡ್ ಶೋ ನಡೆಸಿದರು. ಪ್ರಧಾನಿ ಮೋದಿಗಾಗಿ ರೋಡ್ ಶೋ ನಡೆಯುವ ರಸ್ತೆಯುದ್ದಕ್ಕೂ ಸಾವಿರಾರು ಮಂದಿ ಜಮಾಯಿಸಿ ಪ್ರಧಾನಿ ಮೋದಿ ಅವರಿಗೆ ಜೈಕಾರ ಕೂಗಿದರು. ಈ ಸಂದರ್ಭ ಮೋದಿ ಅವರು ಕೈಯಲ್ಲಿ ಹೊಳೆಯುವ ಕಮಲದ ಚಿಹ್ನೆಯನ್ನು ಹಿಡಿದುಕೊಂಡಿದ್ದರು. ರೋಡ್ ಶೋ ಉದ್ದಕ್ಕೂ ಬಿಜೆಪಿ ಕಾರ್ಯಕರ್ತರು ಮತ್ತು ಸಾರ್ವಜನಿಕರು ಪ್ರಧಾನಿ ಮೋದಿ ಅವರ ಮೇಲೆ ನಿರಂತರ ಪುಷ್ಪ ವೃಷ್ಟಿ ಗೈದರು.
ಮೋದಿ ಅವರಿದ್ದ ವಿಶೇಷ ವಾಹನದಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಮತ್ತು ಉಡುಪಿ-ಚಿಕ್ಕಮಗಳೂರು ಅಭ್ಯರ್ಥಿ ಕೋಟ ಶ್ರೀನಿವಾಸ ಉಪಸ್ಥಿತರಿದ್ದರು. ಇನ್ನು ಕರಾವಳಿಯ ವಿಶೇಷ ವಾದ್ಯಗಳು, ಯಕ್ಷಗಾನ, ಹುಲಿ ವೇಷ, ಚಂಡೆ ಮೇಳಗಳು ರೋಡ್ ಶೋನ ಮೆರಗನ್ನು ಹೆಚ್ಚಿಸಿದವು.