ಮಂಗಳೂರು, ಏ 13 (DaijiworldNews/MS): ಚುನಾವಣೆ ಹಿನ್ನೆಲೆಯಲ್ಲಿ ಕೋವಿಗಳನ್ನು ಪೊಲೀಸ್ ಠಾಣೆಗಳಲ್ಲಿ ಠೇವಣಿ ಇಡುವ ವಿಚಾರಕ್ಕೆ ದಕ್ಷಿಣ ಕನ್ನಡ ಹಾಗೂ ಕಾಡುಪ್ರಾಣಿಗಳ ಉಪಟಳ ಇರುವ ಮಲೆನಾಡು ಪ್ರದೇಶದ ಸುಮಾರು ನಾಲ್ಕು ಸಾವಿರದಷ್ಟು ಕೃಷಿಕರು ತೀವ್ರ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಕೋವಿಗಾಗಿ ತುರ್ತು ಸಹಾಯವಾಣಿ 112 ಕ್ಕೆ ಕರೆ ಮಾಡುವ ಕೃಷಿಕರ ಅಭಿಯಾನ ಜೋರಾಗಿದೆ.
ರಾತ್ರಿ ಕರೆ ಮಾಡಿ, ಕಾಡು ಹಂದಿ ಬಂದಿದೆ , ಇತರ ಪ್ರಾಣಿಗಳು ಬಂದಿವೆ; ನಮ್ಮ ಬೆಳೆಯನ್ನು ರಕ್ಷಿಸಲು ಬನ್ನಿ ಎಂದು ಕರೆ ಮಾಡುತ್ತಿದ್ದಾರೆ. ಈ ಮೂಲಕ ಚುನಾವಣೆ ವೇಳೆ ಕೃಷಿಕರು ಕೋವಿಗಳನ್ನು ಠಾಣೆಗಳಲ್ಲಿ ಠೇವಣಿ ಇರಿಸಬೇಕು ಎಂಬ ಸರಕಾರ ನಿಯಮದ ವಿರುದ್ದ ಕೃಷಿಕರು ಈ ಮೂಲಕ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಪ್ರತಿ ದಿನ ಜಿಲ್ಲೆಯಿಂದ ೫೦ ಕ್ಕೂ ಅಧಿಕ ಕರೆಗಳು ಸಹಾಯವಾಣಿಗೆ ತಲುಪುತ್ತಿದೆ. ಕೆಲವೊಂದು ಕೃಷಿಕರ ಕರೆಗಳಿಗೆ ಸಿಬ್ಬಂದಿ ಉತ್ತರಿಸಿದ್ದಾರೆ. ಮತ್ತೆ ಕೆಲವು ಕರೆಗಳಿಗೆ ಸ್ಪಂದಿಸಿಲ್ಲ. ರಾತ್ರಿ 11ರ ಬಳಿಕ ಕರೆಯನ್ನೇ ಸ್ವೀಕರಿಸಿಲ್ಲ. ೨೪ ಗಂಟೆ ತುರ್ತು ಸಹಾಯವಾಣಿಯ ಸೇವೆ ಇದೇ ರೀತಿ ಇರಬಹುದೇ ಎಂದು ಕೃಷಿಕರು ಪ್ರಶ್ನಿಸಿದ್ದಾರೆ.