ಕಡಬ, ಏ 13 (DaijiworldNews/MS): ಮೊಸಳೆಯ ಮೃತದೇಹವು ಕುಮಾರಧಾರಾ ನದಿಯ ಪಂಜ ಕಡಬ ಸಂಪರ್ಕ ರಸ್ತೆಯಲ್ಲಿ ಸಿಗುವ ಪುಳಿಕುಕ್ಕು ಸೇತುವೆಯ ಕೆಳಭಾಗದಲ್ಲಿ ಪತ್ತೆಯಾಗಿದೆ.
ಏ.12ರಂದು ನದಿಯ ನೀರಿನಲ್ಲಿ ಸುಮಾರು 2 ವರ್ಷದ ಮೊಸಳೆಯ ಮೃತದೇಹ ತೇಲುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸಾಮಾನ್ಯವಾಗಿ ಮೊಸಳೆಯ ಜೀವಿತಾವಧಿ 50ರಿಂದ 60 ವರ್ಷ. ಆದರೆ ಇಲ್ಲಿ ಮೃತಪಟ್ಟಿರುವುದು ಕೇವಲ 2 ವರ್ಷ ಒಳಗಿನದ್ದು. ನದಿಯಲ್ಲಿ ನೀರಿನ ಹರಿವು ಕುಂಠಿತಗೊಂಡಿದ್ದು, ಅಲ್ಲಲ್ಲಿ ಸಂಗ್ರಹವಾಗಿರುವ ನೀರು ಸೂರ್ಯನ ಪ್ರಖರತೆಗೆ ಬಿಸಿಯಾಗಿ ಸಾವನ್ನಪ್ಪಿರಬಹುದೇ ಅಥವಾ ನೀರು ಕಲುಷಿತಗೊಂಡು ಮೃತಪಟ್ಟಿರಬಹುದೇ ಎಂಬ ಶಂಕೆಯನ್ನು ಜನಸಾಮಾನ್ಯ ವ್ಯಕ್ತಪಡಿಸಿದ್ದಾರೆ.ಸ್ಥಳಕ್ಕೆ ಪಂಜ ವಲಯ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬಂದಿ ಅಗಮಿಸಿ ಮೃತದೇಹವನ್ನು ತೆರವು ಮಾಡಿದ್ದಾರೆ.
ಮೊಸಳೆಯ ಮೃತದೇಹ ಪತ್ತೆ ಸ್ಥಳದಲ್ಲಿ ಮೀನುಗಳು ಇದ್ದು ಅವುಗಳಿಗೆ ಏನೂ ಆಗಿಲ್ಲ. ಅಲ್ಲದೆ ಮೃತದೇಹ ಸಿಕ್ಕಿರುವ ಸ್ಥಳದಲ್ಲಿ ನೀರು ಹರಿಯುತ್ತಿದೆ. ಇನ್ನೊಂದು ಮೊಸಳೆಯ ಜತೆಗಿನ ಕಾಳಗದಲ್ಲಿ ಸಾವನ್ನಪ್ಪುವ ಸಾಧ್ಯತೆ ಇದ್ದರೂ ದೇಹದಲ್ಲಿ ಗಾಯ ಕಂಡುಬಂದಿಲ್ಲ. ಮೊಸಳೆಯ ಮರಣೋತ್ತರ ಪರೀಕ್ಷೆಯನ್ನು ವೈದ್ಯರು ನಡೆಸಿ ವರದಿ ನೀಡಲಿದ್ದು, ಬಳಿಕವೇ ಸಾವಿಗೆ ಕಾರಣ ತಿಳಿದುಬರಲಿದೆ ಎಂದು ಪಂಜ ವಲಯ ಅರಣ್ಯಾಧಿಕಾರಿ ಗಿರೀಶ್ ತಿಳಿಸಿದ್ದಾರೆ.