ಮಂಗಳೂರು, ಏ. 12 (DaijiworldNews/AA): ಬೆಂಗಳೂರು-ಮಂಗಳೂರು ಮಧ್ಯೆ ಸಂಚರಿಸುವ ರೈಲಿನ ಎಸಿ ಕೋಚ್ ನಲ್ಲಿ 3.91 ಲಕ್ಷ ರೂ. ಮೌಲ್ಯದ 59.885 ಗ್ರಾಂ ಚಿನ್ನಾಭರಣ ಕಳವಾಗಿರುವ ಬಗ್ಗೆ ರೈಲ್ವೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಂಗಳೂರು ನಗರದ ಜಪ್ಪು ನಿವಾಸಿ 74ರ ಹರೆಯದ ವೃದ್ಧೆ, ಆಕೆಯ ಮಗಳು ಹಾಗೂ ಮೊಮ್ಮಕ್ಕಳು ಏಪ್ರಿಲ್ 7ರಂದು ಬೆಂಗಳೂರಿನಿಂದ ಮಂಗಳೂರಿಗೆ ರೈಲಿನಲ್ಲಿ ಬರುತ್ತಿದ್ದರು. ಬಳಿಕ ಏಪ್ರಿಲ್ 8 ರಂದು ಬೆಳಗ್ಗೆ ಮನೆಗೆ ತಲುಪಿದಾಗ ವ್ಯಾನಿಟಿ ಬ್ಯಾಗ್ನಲ್ಲಿಟ್ಟಿದ್ದ ಎರಡು ಬಳೆಗಳು, ಸರ ಸೇರಿ ಸುಮಾರು 59.885 ಗ್ರಾಂ ಚಿನ್ನಾಭರಣ ಕಳವಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ರೈಲ್ವೆ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ವರದಿಯಾಗಿದೆ.