ಮಂಗಳೂರು, ಏ 11 (DaijiworldNews/AA): ತುಂಬೆ ಡ್ಯಾಂಗೆ ಹರೇಕಳ ಡ್ಯಾಂನ ನೀರು ಪಂಪಿಂಗ್ ನ ಹೊರತಾಗಿಯೂ ಎಎಂಆರ್ ಡ್ಯಾಂನ ನೀರು ಹರಿಸಿ ತುಂಬೆ ನೀರಿನ ಮಟ್ಟ ಏರಿಸಲಾಗಿತ್ತು. ಆದರೆ ಇಂದು ಮತ್ತೆ ತುಂಬೆ ನೀರಿನ ಮಟ್ಟ 0.15 ಮೀ. ರಷ್ಟು ಕುಸಿತ ಕಂಡಿದೆ. ಸದ್ಯ ತುಂಬೆಯಲ್ಲಿ 5.59 ಮೀ. ನೀರಿದ್ದು, ಇದು ಮಂದಿನ 50 ದಿನಗಳವರೆಗೆ ಮಾತ್ರ ಲಿಪ್ಟ್ ಮಾಡಲು ಸಾಧ್ಯವಾಗಿದೆ. ಈ ನಡುವೆ ನೀರು ರೇಷನಿಂಗ್ ಮಾಡುವ ನಿರ್ಧಾರ ಸದ್ಯಕ್ಕಿಲ್ಲ ಎಂದು ಮಂಗಳೂರು ಮಹಾನಗರ ಪಾಲಿಕೆ ಸ್ಪಷ್ಟನೆ ನೀಡಿದೆ.
ಹರೇಕಳ ಡ್ಯಾಂನಿಂದ ಪ್ರತೀ ದಿನ 50ರಿಂದ 60 ಎಂಎಲ್ ಡಿ ನೀರು ತುಂಬೆ ಡ್ಯಾಂಗೆ ಪಂಪ್ ಮಾಡಲಾಗುತ್ತಿದೆ. ಮಂಗಳೂರಿಗೆ ನಿತ್ಯ 155 ಎಂಎಲ್ ಡಿ ನೀರು ಸರಬರಾಜು ಮಾಡುವ ಉದ್ದೇಶದಿಂದ ಶೇ.40ರಷ್ಟು ನೀರನ್ನು ಡ್ಯಾಂನ ಕೆಳಭಾಗದಿಂದ ಪಡೆಯಲಾಗುತ್ತಿದ್ದು, ಕಳೆದೊಂದು ವಾರದಿಂದ ಪ್ರತೀ ದಿನ 10 ಸೆಂ.ಮೀ. ನಷ್ಟು ನೀರು ತುಂಬೆ ಡ್ಯಾಂನಲ್ಲಿ ಕುಸಿತ ಕಾಣುತ್ತಿದೆ. ಆದರೀಗ ಡ್ಯಾಂನ ಕೆಳಭಾಗದ ನೀರು ಪಂಪಿಂಗ್ ಮಾಡುವ ಕಾರಣ ಸದ್ಯ 6-7 ಸೆಂ.ಮೀ.ನಷ್ಟು ನೀರು ಕಡಿಮೆಯಾಗುತ್ತಿದ್ದು, ಪ್ರಸ್ತುತ ಎಎಂಆರ್ ಡ್ಯಾಂ ಮಟ್ಟ 15.74 ಮೀ. ಇದೆ. ಇಲ್ಲೂ ಪ್ರತೀ ದಿನ 0.04 ಮೀ. ನಷ್ಟು ನೀರು ಕುಸಿತ ಕಾಣುತ್ತಿದೆ. ತುಂಬೆ ಡ್ಯಾಂನ ಮಟ್ಟ 5 ಕ್ಕೆ ಇಳಿದಾಗ ಎಎಂಆರ್ ನಿಂದ ಮತ್ತೆ ನೀರು ಬಿಡಲು ದಕ್ಷಿಣ ಕನ್ನಡ ಜಿಲ್ಲಾಡಳಿತ ನಿರ್ಧಾರ ಮಾಡಿದೆ.