ಬೆಳ್ತಂಗಡಿ, ಏ 11 (DaijiworldNews/AA): ಹಾಸನದ ಸಕಲೇಶಪುರದ ಬೈಹುಲ್ಲು ವ್ಯಾಪಾರಸ್ಥರೋರ್ವರು ತನ್ನ ಮಿನಿ ಲಾರಿಯಲ್ಲಿ ಹೈನುಗಾರಿಕೆ ಮಾಡುವ ಕೃಷಿಕರ ಮನೆ ಮನೆಗೆ ಬೈ ಹುಲ್ಲನ್ನು ತರುವಾಗ ಏಕಾಏಕಿ ಬೆಂಕಿ ಹೊತ್ತಿಕೊಂಡ ಘಟನೆ ಬೆಳ್ತಂಗಡಿ ತಾಲ್ಲೂಕಿನ ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಟ್ಟೆಮಾರು ಎಂಬಲ್ಲಿ ಗುರುವಾರ ನಡೆದಿದೆ.
ಬೆಂಕಿ ಹೊತ್ತಿಕೊಳ್ಳುತ್ತಲೇ ಸ್ಥಳೀಯರೊಬ್ಬರು ಬೊಬ್ಬೆ ಹಾಕಿ ಮಾಹಿತಿ ನೀಡಿದರು. ಕೂಡಲೇ ಲಾರಿಯವರು ಸ್ಥಳೀಯ ಕೃಷಿಕ ಪುರಂದರ ನಾಯ್ಕರವರ ಮನೆಯ ಬಳಿ ನಿಲ್ಲಿಸಿ, ಕೊಳವೆ ಬಾವಿಯ ಪೈಪ್ ನಲ್ಲಿ ನೀರು ಹಾಕಿದರು. ಅಷ್ಟು ಹೊತ್ತಿಗೆ ಬಟ್ಟೆಮಾರು ವಿನ ಎಸ್.ಎಸ್.ಎಫ್, ಕೆ.ಎಮ್.ಜೆ.ಎಸ್.ವೈ.ಎಸ್. ಸಂಘಟನೆಯ ಸದಸ್ಯರು ಹಾಗೂ ಸ್ಥಳೀಯರು ತಮ್ಮ ಮನೆಗಳಿಂದ ನೀರನ್ನು ತಂದು ಹಾಕಲು ಪ್ರಾರಂಭಿಸಿದರು. ಜೊತೆಗೆ ಸ್ಥಳೀಯ ಅಂಗನವಾಡಿಯ ಕಾರ್ಯಕರ್ತೆ ಕೂಡಾ ನೀರು ಹಾಕಿ ನಂದಿಸಲು ಪ್ರಯತ್ನಿಸಿದರು. ಆದರೆ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಅದಾಗಲೇ ಬೆಂಕಿಯ ಜ್ಞಾಲೆ ಅತೀಯಾಗಿತ್ತು. ಆದರೆ ಯಾವುದನ್ನು ಲೆಕ್ಕಿಸದೇ ಯುವಕರು ಕಾರ್ಯ ಪ್ರವೃತ್ತರಾದರು.
ಆ ವೇಳೆಗೆ ಸ್ಥಳೀಯ ವಾರ್ಡ್ ಸದಸ್ಯರಾದ ಅಬ್ದುಲ್ ಕರೀಮ್ ಗೇರುಕಟ್ಟೆಯವರಿಗೆ ಮಾಹಿತಿ ದೊರೆತು ಅಗ್ನಿಶಾಮಕ ದಳದವರಿಗೆ ಕೂಡಲೇ ಸ್ಥಳಕ್ಕೆ ಬರಲು ತಿಳಿಸಿದ್ದಾರೆ. ಬಳಿಕ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸಿದರು. ಪಕ್ಕದಲ್ಲೆ ಕೆಲಸ ಮಾಡುತ್ತಿದ್ದ ವಿನಯ ಪ್ರಸಾದ್ ಕೂಡಾ ಲಾರಿಯಿಂದ ಬೆಂಕಿ ಹತ್ತಿದ ಹುಲ್ಲನ್ನು ಜೆ.ಸಿ.ಬಿ.ಯಿಂದ ತೆರವು ಮಾಡಿದರು. ಪಂಚಾಯತ್ ನಿಂದ ಸಿಬ್ಬಂದಿ ರವಿ ಮತ್ತು ಸುರೇಶ್ ಗೌಡ ಕೂಡಾ ಸಹಕರಿಸಿದರು.