ಮಂಗಳೂರು, ಮೇ02(Daijiworld News/SS): ನಗರದಲ್ಲಿ ನೀರಿನ ಸಮಸ್ಯೆಯಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ನೀರು ರೇಷನಿಂಗ್ ಆರಂಭಿಸಲಾಗಿದೆ.
ಮಂಗಳೂರಿಗೆ ನೀರು ಪೂರೈಕೆ ಮಾಡುತ್ತಿದ್ದ ತುಂಬೆ ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಮಳೆಯಾಗುವ ತನಕ ಮಂಗಳೂರು ನಗರಕ್ಕೆ 4 ದಿನ ನೀರು ಪೂರೈಸಿ 2 ದಿನ ನೀರು ಸ್ಥಗಿತಗೊಳಿಸಲು ಮಹಾನಗರ ಪಾಲಿಕೆ ನಿರ್ಧರಿಸಿದೆ.
ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಹಾಗೂ ಪಾಲಿಕೆ ಆಯುಕ್ತ ನಾರಾಯಣಪ್ಪ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಹಿಂದಿನ ರೇಷನಿಂಗ್ ತೀರ್ಮಾನ ದಂತೆಯೇ 48 ಗಂಟೆಗಳ ಕಡಿತ ಹಾಗೂ 96 ಗಂಟೆಗಳ ನೀರು ಸರಬರಾಜು ನಡೆಯಲಿದೆ ಎಂದು ತಿಳಿಸಿದ್ದಾರೆ.
ಮೇ 1ರ ಬೆಳಗ್ಗೆ 6 ಗಂಟೆಯಿಂದ ಮುಂದಿನ 48 ಗಂಟೆಗಳವರೆಗೆ ನೀರು ಪೂರೈಕೆ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ. ಮೇ 3ರಂದು ಬೆಳಗ್ಗೆ 6 ಗಂಟೆಯಿಂದ ಮುಂದಿನ 96 ಗಂಟೆ ನೀರು ಪೂರೈಕೆಯಾಗಲಿದ್ದು, ಮೇ 7ರಂದು ಬೆಳಗ್ಗೆ 6 ಗಂಟೆಗೆ ನೀರು ಮತ್ತೆ ಸ್ಥಗಿತಗೊಳ್ಳಲಿದೆ.
ಈ ಪ್ರಕ್ರಿಯೆ ಮೇ 21ರ ವರೆಗೆ ಇದೇ ರೀತಿ ಮುಂದುವರಿಯಲಿದೆ. ಬಳಿಕ ನೀರಿನ ಲಭ್ಯತೆ ನೋಡಿ ಮುಂದಿನ ಕ್ರಮ ಅನುಸರಿಸಲಾಗುವುದು. ಒಂದು ವೇಳೆ ಮಳೆ ಬಂದು ನೀರಿನ ಪ್ರಮಾಣ ಹೆಚ್ಚಳವಾದರೆ ರೇಷನಿಂಗ್ ಪದ್ಧತಿ ಕೈಬಿಡಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಕರಾವಳಿಯಲ್ಲಿ ಬಿರುಬೇಸಿಗೆಯಿಂದಾಗಿ ನೀರಿಗೆ ಹಾಹಾಕಾರ ಶುರುವಾಗಿದೆ. ನದಿಗಳಲ್ಲಿ ನೀರಿನ ಪ್ರಮಾಣ ಇಳಿಕೆ ಯಾಗಿ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ.