ಮಂಗಳೂರು, ಏ 09 (DaijiworldNews/MS): ಉಳ್ಳಾಲ ಮತ್ತು ಮೆಲ್ಕಾರ್ನಲ್ಲಿ ಕೋಮುದ್ವೇಷದ ಹಿನ್ನೆಲೆಯಲ್ಲಿ ನಡೆದಿದ್ದ ಎರಡು ಪ್ರತ್ಯೇಕ ಕೊಲೆ ಪ್ರಕರಣ ಆರೋಪಿಗಳ ಮೇಲಿನ ಆರೋಪವು ನ್ಯಾಯಾಲಯದಲ್ಲಿ ಸಾಬೀತಾಗಿದೆ. ಶಿಕ್ಷೆಯ ಪ್ರಮಾಣವನ್ನು ಎ.16ರಂದು ಪ್ರಕಟಿಸುವುದಾಗಿ ನ್ಯಾಯಾಧೀಶರು ತಿಳಿಸಿದ್ದಾರೆ.
ನಾಸಿರ್ ಕೊಲೆ ಪ್ರಕರಣ:
2015ರ ಆ.5ರಂದು ರಾತ್ರಿ 4-5 ಮುಸ್ಲಿಂ ಸಮುದಾಯದ ಯುವಕರು ಬಂಟ್ವಾಳ ತಾಲೂಕಿನ ಕೊಳ್ನಾಡ್ ಗ್ರಾಮದ ಆಲಬೆಯಲ್ಲಿ ವಿಜೇತ್ ಕುಮಾರ್ ಮತ್ತು ಅಭಿ ಯಾನೆ ಅಭಿಜಿತ್ ಮೇಲೆ ಹಲ್ಲೆ ನಡೆಸಿದ್ದರು. ಇದರ ಮನಸ್ತಾಪಗೊಂಡಿದ್ದ ಆರೋಪಿಗಳು ಮುಸ್ಲಿಂ ಯುವಕರನ್ನು ಹತ್ಯೆ ಮಾಡಲು ಸಂಚು ನಡೆಸಿದ್ದರು. ಅದರಂತೆ 2015ರ ಆ.6ರಂದು ಮುಹಮ್ಮದ್ ಮುಸ್ತಫ ಮತ್ತು ಮುಹಮ್ಮದ್ ನಾಸೀರ್ ಅವರು ಮೆಲ್ಕಾರ್ನಿಂದ ಮುಡಿಪು ಕಡೆಗೆ ಆಟೊ ರಿಕ್ಷಾದಲ್ಲಿ ಬರುತ್ತಿದ್ದಾಗ ಆರೋಪಿಗಳಾದ ವಿಜೇತ್ ಕುಮಾರ್, ಕಿರಣ್, ಅನೀಶ್ ಆಲಿಯಾಸ್ ಧನು, ಅಭಿ ಯಾನೆ ಅಭಿಜಿತ್ ಬೈಕ್ನಲ್ಲಿ ಹಿಂಬಾಲಿಸಿಕೊಂಡು ಬಂದು ರಾತ್ರಿ ಸುಮಾರು 10:45ಕ್ಕೆ ಸಜಿಪ ಮೂಡ ಗ್ರಾಮದ ಕೊಳಕೆ ಎಂಬಲ್ಲಿ ಆಟೋರಿಕ್ಷಾ ತಡೆದು ನಿಲ್ಲಿಸಿ ತಲವಾರಿನಿಂದ ಹಲ್ಲೆ ನಡೆಸಿದ್ದರು.
ಇದರಿಂದ ಮುಹಮ್ಮದ್ ಮುಸ್ತಫ ಮತ್ತು ಮುಹಮ್ಮದ್ ನಾಸಿರ್ ಗಾಯಗೊಂಡಿದ್ದರು. ಮುಹಮ್ಮದ್ ನಾಸಿರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಇನ್ಸ್ಪೆಕ್ಟರ್ ಕೆ.ಯು.ಬೆಳ್ಳಿಯಪ್ಪ ತನಿಖೆ ಪೂರ್ಣಗೊಳಿಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. 29 ಸಾಕ್ಷಿದಾರರನ್ನು ವಿಚಾರಿಸಿ 40 ದಾಖಲೆಗಳನ್ನು ಗುರುತಿಸಲಾಗಿದೆ. 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಎಚ್.ಎಸ್. ಆರೋಪಿಗಳು ದೋಷಿಗಳೆಂದು ಸೋಮವಾರ ತೀರ್ಪು ನೀಡಿದ್ದಾರೆ. ಶಿಕ್ಷೆಯ ಪ್ರಮಾಣದ ಮೇಲಿನ ವಿಚಾರಣೆಯನ್ನು ಎ.16ಕ್ಕೆ ನಿಗದಿಪಡಿಸಲಾಗಿದೆ. ಸರಕಾರದ ಪರವಾಗಿ ಶೇಖರ ಶೆಟ್ಟಿ ವಿಚಾರಣೆ ನಡೆಸಿದ್ದು ಜುಡಿತ್ ಓಲ್ಗಾ ಮಾರ್ಗರೇಟ್ ಕ್ರಾಸ್ತಾ ವಾದ ಮಂಡಿಸಿದ್ದರು.
ರಾಜೇಶ್ ಕೋಟ್ಯಾನ್ ಕೊಲೆ ಪ್ರಕರಣ:
2016ರ ಎಪ್ರಿಲ್ನಲ್ಲಿ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮೊಗವೀರ ಪಟ್ಣದ ಹಿಂದೂ ಮತ್ತು ಮುಸ್ಲಿಂ ಯುವಕರ ನಡುವೆ ಕೋಮು ಸಂಘರ್ಷ ನಡೆಯುತ್ತಿತ್ತು. ಎ.12ರ ಮುಂಜಾನೆ ಮೀನುಗಾರಿಕೆಗೆಂದು ಕೋಟೆಪುರ ರಸ್ತೆಯಲ್ಲಿ ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ರಾಜೇಶ್ ಕೋಟ್ಯಾನ್ ಯಾನೆ ರಾಜ (44) ಅವರ ಮೇಲೆ ಆರೋಪಿಗಳು ಮರದ ದೊಣ್ಣೆಗಳಿಂದ ಹಲ್ಲೆ ಮಾಡಿ ಅನಂತರ ಮುಖಕ್ಕೆ ಕಲ್ಲಿನಿಂದ ಜಜ್ಜಿ ಹೊಡೆದು ಕೊಲೆ ಮಾಡಿದ್ದರು. ಮುಹಮ್ಮದ್ ಆಸಿಫ್ ಯಾನೆ ಆಚಿ, ಮುಹಮ್ಮದ್ ಸುಹೈಲ್ ಯಾನೆ ಸುಹೈಲ್, ಅಬ್ದುಲ್ ಮುತಾಲಿಫ್ ಯಾನೆ ಮುತ್ತು, ಅಬ್ದುಲ್ ಅಸ್ವೀರ್ ಯಾನೆ ಅಚ್ಚು ಮತ್ತು ಕಾನೂನಿನ ಸಂಘರ್ಷಕ್ಕೊಳಗಾದ ಇಬ್ಬರು ಬಾಲಕರು ಪ್ರಕರಣದ ಆರೋಪಿಗಳಾಗಿದ್ದರು. ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕರ ಹೊರತು ಇತರ ಆರೋಪಿಗಳ ವಿಚಾರಣೆ ನಡೆದಿದ್ದು, ಅವರ ಮೇಲಿನ ಆರೋಪ ಸಾಬೀತಾಗಿದೆ. ಆರೋಪಿಗಳು ಹಿಂದೂವೊಬ್ಬನನ್ನು ಕೊಲೆ ಮಾಡಬೇಕು ಎಂದು ನಿರ್ಧರಿಸಿ ಸಂಚು ರೂಪಿಸಿದ್ದರು.
ರಾಜೇಶ್ ಕೋಟ್ಯಾನ್
ಉಳ್ಳಾಲ ಠಾಣೆಯ ನಿರೀಕ್ಷಕ ಅಶೋಕ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆ ಫೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿ ಡಾ. ಮಹಾಬಲೇಶ್ ಶೆಟ್ಟಿ ಮತ್ತು ತಂಡದವರು ಘಟನಾ ಸ್ಥಳ ತಪಾಸಣೆ ನಡೆಸಿ ತಪಾಸಣಾ ವರದಿ ಮತ್ತು ಶವಪರೀಕ್ಷಾ ವರದಿ ಸಲ್ಲಿಸಿದ್ದರು.
ಒಟ್ಟು 28 ಸಾಕ್ಷಿದಾರರನ್ನು ವಿಚಾರಣೆಗೊಳಪಡಿಸಿ 78 ದಾಖಲೆಗಳನ್ನು ಗುರುತಿಸಲಾಗಿತ್ತು. ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್. ನಾಲ್ವರು ಆರೋಪಿಗಳು ದೋಷಿತರೆಂದು ಸೋಮವಾರ ತೀರ್ಪು ನೀಡಿದ್ದಾರೆ. ಶಿಕ್ಷೆಯ ಪ್ರಮಾಣದ ಮೇಲಿನ ವಿಚಾರಣೆಯನ್ನು ಎ.16ಕ್ಕೆ ನಿಗದಿಪಡಿಸಲಾಗಿದೆ.