ಮಂಗಳೂರು, ಏ 09 (DaijiworldNews/MS): ಪತ್ನಿಯನ್ನು ಹತ್ಯೆಗೈದ ಆರೋಪಿ ಪತಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ನಾಲ್ಕು ವರ್ಷದ ಹಿಂದೆ ಕಾವೂರಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಮೂಲತಃ ಹಾಸನ ಅರಕಲಗೂಡಿನ ಮಾಲಿಪಟ್ಣದ, ಕಾವೂರಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಟಿಪ್ಪರ್ ಚಾಲಕ ಗಣೇಶ್ ಕುಮಾರ್ (46) ಶಿಕ್ಷೆಗೊಳಗಾದ ಆರೋಪಿ.
ಈತ ತನ್ನ ಪತ್ನಿಯ ಶೀಲ ಶಂಕಿಸಿ ದಿನನಿತ್ಯ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದ ಎಂಬ ಆರೋಪವಿತ್ತು. 2020ರ ಜು.1ರಂದು ಸಂಜೆ 5:30ಕ್ಕೆ ಸಾಮಾನು ತರಲಿಕ್ಕಿದೆ ಎಂದು ಹೇಳಿ ಪತ್ನಿಯನ್ನು ಬೈಕ್ನಲ್ಲಿ ಕರೆದುಕೊಂಡು ಹೋಗಿದ್ದ. ರಾತ್ರಿ 7ರಿಂದ 7:20ರ ಮಧ್ಯೆ ಅಂತೋನಿಕಟ್ಟೆ ಎಂಬಲ್ಲಿರುವ ತಾನು ಕೆಲಸ ಮಾಡುತ್ತಿದ್ದ ಕಪ್ಪು ಕಲ್ಲಿನ ಕೋರೆಯ ಮೇಲಿನಿಂದ ಪತ್ನಿಯ ಕತ್ತು ಹಿಸುಕಿ ದೂಡಿ ಹಾಕಿ ಹತ್ಯೆ ಮಾಡಿದ್ದ. ತನಿಖೆ ವೇಳೆ ಮಹಿಳೆ ಸಾವನ್ನಪ್ಪಿದ ಸ್ಥಳದಲ್ಲಿ ಮಹಿಳೆಯ ಹೆಲ್ಮೆಟ್ ಮತ್ತು ಪರ್ಸ್ ಪತ್ತೆಯಾಗಿತ್ತು.
ಪ್ರಕರಣದ ಬಗ್ಗೆ ಕಾವೂರು ಠಾಣೆಯ ಇನ್ಸ್ಪೆಕ್ಟರ್ ರಾಘವ ಎಸ್. ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ಎಸ್.ವಿ. ವಿಚಾರಣೆ ನಡೆಸಿ ಆರೋಪಿಯ ಮೇಲಿನ ಆರೋಪ ಸಾಬೀತಾಗಿದ್ದರಿಂದ ಸೋಮವಾರ ಭಾರತೀಯ ದಂಡ ಸಂಹಿತೆಯ ಕಲಂ 302ರ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಮತ್ತು 1 ಲ.ರೂ. ದಂಡ, ಭಾರತೀಯ ದಂಡ ಸಂಹಿತೆ ಕಲಂ 498 (ಎ)ರ ಅಪರಾಧಕ್ಕೆ 3 ವರ್ಷ ಕಠಿಣ ಶಿಕ್ಷೆ ಮತ್ತು 25,000 ರೂ. ದಂಡ, ಭಾರತೀಯ ದಂಡ ಸಂಹಿತೆ ಕಲಂ 506ರ ಅಪರಾಧಕ್ಕೆ 2 ವರ್ಷ ಕಠಿಣ ಶಿಕ್ಷೆ ಮತ್ತು 25,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೆ ಸಂತ್ರಸ್ತರಿಗೆ ಪರಿಹಾರ ನೀಡಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ. ಸರಕಾರಿ ಅಭಿಯೋಜಕರಾದ ಜ್ಯೋತಿ ಪ್ರಮೋದ ನಾಯಕ ಮತ್ತು ಬಿ.ಶೇಖರ ಶೆಟ್ಟಿ, ಚೌಧರಿ ಮೋತಿಲಾಲ ವಾದ ಮಂಡಿಸಿದ್ದರು