ಗಂಗೊಳ್ಳಿ ಏ 09 (DaijiworldNews/MS): ಸಂಸದ ಬಿ.ವೈ.ರಾಘವೇಂದ್ರ ಅವರು ನಾಲ್ಕನೇ ಬಾರಿ ಶಿವಮೊಗ್ಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಅವರ ಸಂಸತ್ ಸದಸ್ಯರ ಅವಧಿಯಲ್ಲಿ ತಾರತಮ್ಯ ಮಾಡದೆ ಸಾಕಷ್ಟು ಅಭಿವೃದ್ಧಿ, ಸಾಧನೆ ಮಾಡಿದ್ದಾರೆ. ಕಾಂಗ್ರೆಸ್ ಸಭೆಗಳಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರ ಬಗ್ಗೆ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರು ಬಹಳ ಹಗುರವಾಗಿ ಮಾತನಾಡಿರುವುದು ಖಂಡನೀಯ ಎಂದು ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಹೇಳಿದರು.
ಬೈಂದೂರಿನ ಬಿಜೆಪಿ ಲೋಕಸಭಾ ಕಛೇರಿಯಲ್ಲಿ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸುಮಾರು 15 ವರ್ಷಕ್ಕೂ ಮಿಕ್ಕಿ ಬೈಂದೂರು ಶಾಸಕರಾಗಿದ್ದ ಗೋಪಾಲ ಪೂಜಾರಿ ಅವರು ಅವರ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾಮಗಾರಿಗಳ ಪಟ್ಟಿ ಕೊಡಲಿ, ಸಂಸದ ಬಿ.ವೈ.ರಾಘವೇಂದ್ರ ಅವರ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳ ಪಟ್ಟಿ ಕೊಡುತ್ತೇವೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕನಸು ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರ ಪರಿಶ್ರಮದಿಂದ ಮೀನುಗಾರಿಕೆ ಬಂದರು ಅಭಿವೃದ್ಧಿ, ವೆಂಟೆಡ್ ಡ್ಯಾಮ್ ಹಾಗೂ ಗುಣಮಟ್ಟದ ರಸ್ತೆಗಳ ನಿರ್ಮಾಣ, ಮನೆ ಮನೆಗೆ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡಿದೆ. ವಿವಿಧ ಸಮುದಾಯಗಳ ಸಮುದಾಯ ಭವನಗಳ ನಿರ್ಮಾಣಕ್ಕೆ ಸಂಸದ ರಾಘವೇಂದ್ರ ಅನುದಾನ ಒದಗಿಸಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಂಸದರಲ್ಲಿ ಓರ್ವರಾಗಿರುವ ಬಿ.ವೈ.ರಾಘವೇಂದ್ರ ಅವರ ಬಗ್ಗೆ ಕ್ಷೇತ್ರದಲ್ಲಿ ಉತ್ತಮ ಅಭಿಪ್ರಾಯ ಇದ್ದು, ಕ್ಷೇತ್ರದ ಜನರಿಗೆ ಅವರ ಸಾಧನೆಗಳ ತೃಪ್ತಿ ಇದೆ ಎಂದರು.
ಬಿಜೆಪಿ ಸರಕಾರದ ಅವಧಿಯಲ್ಲಿ ದೇವಾಡಿಗ ಸಮಾಜ ಸಮುದಾಯ ಭವನ ನಿರ್ಮಾಣಕ್ಕೆ ಒಂದು ಕೋಟಿ ರೂ.ಗಳನ್ನು ಅನುದಾನ ನೀಡಲಾಗಿದೆ. ಈ ವಿಚಾರದಲ್ಲಿ ಮಾಜಿ ಶಾಸಕರು ಕಾಂಗ್ರೆಸ್ ಪಕ್ಷದ ಸಭೆಗಳಲ್ಲಿ ಸಂಸದರ ಬಗ್ಗೆ ತಪ್ಪಾಗಿ ಮಾತನಾಡಿದ್ದಾರೆ. ಕಳೆದ ಸರಕಾರದ ಅವಧಿಯಲ್ಲಿ ಸಮುದಾಯ ಭವನಗಳ ನಿರ್ಮಾಣಕ್ಕೆ ಮಂಜೂರಾದ ಅನುದಾನವನ್ನು ತಡೆ ಹಿಡಿಯಲಾಗಿದೆ. ಮಾಜಿ ಶಾಸಕರು ತಡೆ ಹಿಡಿದ ಅನುದಾನವನ್ನು ಸರಕಾರ, ಮುಖ್ಯಮಂತ್ರಿಗಳ ಮುಖಾಂತರ ಬಿಡುಗಡೆ ಮಾಡುವ ಪ್ರಯತ್ನ ಮಾಡಬೇಕು. ಅಭಿವೃದ್ಧಿ ವಿಚಾರದಲ್ಲಿ ನಮ್ಮ ಪಟ್ಟಿ ಮತ್ತು ನಿಮ್ಮ ಪಟ್ಟಿ ನೋಡೋಣ. ಯಾರು ಹೆಚ್ಚು ಅಭಿವೃದ್ಧಿ ಮಾಡಿದ್ದಾರೆ ಎಂಬುದರ ಬಗ್ಗೆ ಮತದಾರರ ಮುಂದಿದೋಣ ಎಂದು ಸವಾಲು ಹಾಕಿದರು.
ಕೇತ್ರದ ಮೀನುಗಾರರಿಗೆ ಏನಾದರೂ ನ್ಯಾಯ ಕೊಟ್ಟಿದ್ದು ಬಿಜೆಪಿ ಸರಕಾರ ಬಿಟ್ಟರೆ, ಕಾಂಗ್ರೆಸ್ ಸರಕಾರ ಮೀನುಗಾರರಿಗೆ ಒಳ್ಳೆಯದಾಗುವ ಯಾವುದೇ ಕಾರ್ಯಕ್ರಮ ನೀಡಿಲ್ಲ. ಮೀನುಗಾರರಿಗೆ ಉಪಯೋಗವಾಗುವ ಯಾವುದೇ ಯೋಜನೆಯನ್ನು ಕಾಂಗ್ರೆಸ್ ಜಾರಿಗೊಳಿಸಿಲ್ಲ ಎಂದು ಹೇಳಿದ ಅವರು, ಎರಡು ವರ್ಷ ಕರೋನಾ ಹಾವಳಿ ಇದ್ದರೂ ಬೈಂದೂರು ಕ್ಷೇತ್ರಕ್ಕೆ ಸುಮಾರು 3 ಸಾವಿರ ಕೋಟಿ ರೂ. ಅನುದಾನ ಬಂದಿದೆ. ಆದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು 10 ತಿಂಗಳು ಕಳೆದರೂ ಈವರೆಗೆ ಒಂದೇ ಒಂದು ರೂಪಾಯಿ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈಗ ಬಿಜೆಪಿಲ್ಲಿರುವ ನಾಯಕರು ಡ್ಯೂಪ್ಲಿಕೇಟ್ ಎಂಬ ಕಾಂಗ್ರೆಸ್ ಆರೋಪಕ್ಕೆ ಉತ್ತರಿಸಿದ ಅವರು, ಜೂ.4ಕ್ಕೆ ಮತ ಎಣಿಕೆ ಕಾರ್ಯ ನಡೆದ ಬಳಿಕ ಡ್ಯೂಪ್ಲಿಕೇಟ್ ಯಾರು ಎಂಬುದು ಸ್ಪಷ್ಟವಾಗುತ್ತದೆ. ಬಿಜೆಪಿಯನ್ನು ಖಾಲಿ ಮಾಡುತ್ತೇವೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಕಿಡಿ ಕಾರಿದ ಅವರು ಇಡೀ ದೇಶಲ್ಲಿ ಕಾಂಗ್ರೆಸ್ ಖಾಲಿಯಾಗುತ್ತಿದೆ. ಒಂದು ವರ್ಷದೊಳಗೆ ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಖಾಲಿಯಾದ ಮನೆಯಾಗುತ್ತದೆ. ನಾಯಕರಿಲ್ಲದೆ ಕಾಂಗ್ರೆಸ್ ನೆಲೆಯಿಲ್ಲದ ವ್ಯವಸ್ಥೆಯಾಗುತ್ತದೆ ಎಂದರು. ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವ ಪ್ರಶ್ನೆಯೇ ಇಲ್ಲ. ಮಂಡಲ ಅಧ್ಯಕ್ಷರಾಗಿ ಸಾಧನೆಯನ್ನು ಎಲ್ಲಾ ಕಾರ್ಯಕರ್ತರು ಒಪ್ಪಿಕೊಂಡು ಸ್ವಾಗತ ಮಾಡಿದ್ದಾರೆ. ಎಲ್ಲರೂ ಒಟ್ಟಾಗಿ ಕ್ಷೇತ್ರದಲ್ಲಿ ಬಿಜೆಪಿಯನ್ನು ಬಲಗೊಳಿಸುವ, ಸಂಸದ ರಾಘವೇಂದ್ರ ಅವರನ್ನು ಮತ್ತೊಮ್ಮೆ ಸಂಸದರನ್ನಾಗಿ ಮಾಡಲಾಗುವುದು ಎಂದು ಅವರು ಹೇಳಿದರು.
ಉಡುಪಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ ಮಾತನಾಡಿ, ಸಂಸದ ಬಿ.ವೈ.ರಾಘವೇಂದ್ರ ಅವರು ದೇವಾಡಿಗ ಸಮುದಾಯಕ್ಕೆ ಯಾವುದೇ ಅನ್ಯಾಯ ಮಾಡಿಲ್ಲ. ದೇವಾಡಿಗ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಒಂದು ಕೋಟಿ ರೂ. ಅನುದಾನ ಬಿಡುಗಡೆ ಮಾಡುವಲ್ಲಿ ಸಂಸದ ರಾಘವೇಂದ್ರ ಪ್ರಮುಖ ಪಾತ್ರ ವಹಿಸಿದ್ದಾರೆ. ದೇವಾಡಿಗ ಸಮುದಾಯ ಭವನಕ್ಕೆ ಬಿಡುಗಡೆಯಾದ ಅನುದಾನವನ್ನು ಕಾಂಗ್ರೆಸ್ ಸರಕಾರ ತಡೆ ಹಿಡಿದಿದೆ. ಇದಕ್ಕೆ ಮೂಲ ಕಾರಣ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ. ಸರಕಾರದ ಮೇಲೆ ಒತ್ತಡ ತಂದು ಅನುದಾನ ಬಿಡುಗಡೆಗೆ ಪ್ರಯತ್ನ ಮಾಡಿದರೆ ಸಮುದಾಯ ಭವನ ನಿರ್ಮಾಣವಾಗುತ್ತಿತ್ತು. ಅವರು ನಂಬಿರುವ ಯಾವುದಾದರೂ ದೇವಸ್ಥಾನ ಇದ್ದರೆ ಅವರು ಅಲ್ಲಿಗೆ ಪ್ರಮಾಣ ಮಾಡುವುದಿದ್ದರೆ ನಮ್ಮ ಸರಕಾರ ತಡೆ ಹಿಡಿದಿಲ್ಲ ಎಂದು ಹೇಳುವುದಾರೆ ನಾವೂ ಬರುತ್ತೇವೆ, ನಾವೂ ಪ್ರಮಾಣ ಮಾಡುತ್ತೇವೆ ಎಂದು ಸವಾಲು ಹಾಕಿದರು. ಇದು ದೇಶದ ಸಮರ್ಥ ನಾಯಕರನ್ನು ಆಯ್ಕೆ ಮಾಡುವ ಚುನಾವಣೆಯೇ ಹೊರತು ವೈಯಕ್ತಿಕ ಋಣ ತೀರಿಸುವ ಚುನಾವಣೆ ಅಲ್ಲ ಎಂದು ಪರೋಕ್ಷವಾಗಿ ಮಾಜಿ ಶಾಸಕರ ನಡೆಯನ್ನು ಟೀಕಿಸಿದರು. 15 ವರ್ಷ ಶಾಸಕರಾಗಿ ಕೆಲಸ ಮಾಡಿದ್ದ ಗೋಪಾಲ ಪೂಜಾರಿಯವರು ಸಂಸದರ ಬಗ್ಗೆ ಮಾತನಾಡುವಾಗ ಯಾವ ರೀತಿ ಮಾತನಾಡಬೇಕು ಎಂದು ಅರಿತಿರಬೇಕು ಮತ್ತು ಆಲೋಚನೆ ಮಾಡಿ ಮಾತನಾಡಬೇಕು ಎಂದ ಅವರು ಹೇಳಿದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ಜಿಲ್ಲಾ ಒಬಿಸಿ ಮೋರ್ಚಾ ಕಾರ್ಯದರ್ಶಿ ರಾಜಶೇಖರ ದೇವಾಡಿಗ, ಕೃಷ್ಣ ದೇವಾಡಿಗ, ಗಣೇಶ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು.