ಕುಂದಾಪುರ,ಏ 07 (DaijiworldNews/AK):ಶಿವಮೊಗ್ಗ ಲೋಕಸಭಾ ಕ್ಷೇತ್ರದೊಂದಿಗಿರುವ ಬೈಂದೂರು ಅನೇಕ ವರ್ಷಗಳಿಂದ ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಆದರೆ ನಾವು ಗೆದ್ದಲ್ಲಿ ಬೈಂದೂರು ಬಗ್ಗೆ ಯಾವುದೇ ಮಲತಾಯಿ ದೋರಣೆ ಮಾಡಲ್ಲ. ಇಲ್ಲಿನ ಮೀನುಗಾರರು, ರೈತರು, ಮಹಿಳೆಯರ ಸಮಸ್ಯೆಗಳಿಗೆ ಹೆಚ್ಚಿನ ಸ್ಪಂದನೆ ನೀಡುತ್ತೇವೆ. ರಾಜ್ಯದಲ್ಲಿ ಐದು ಗ್ಯಾರಂಟಿ ಅನುಷ್ಠಾನಕ್ಕೆ ತಂದಿರುವ ಕಾಂಗ್ರೆಸ್, ಕೇಂದ್ರದಲ್ಲಿಯೂ ಮಹಿಳಾ ಸಬಲೀಕರಣಕ್ಕೆ ಪ್ರಣಾಳಿಕೆಯಲ್ಲಿ ಹೆಚ್ಚಿನ ಆದ್ಯತೆ ನೀಡಿದ್ದೇವೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಹೇಳಿದರು.
ಅವರು ರವಿವಾರ ನಾಡ, ನಾವುಂದ, ಆಲೂರು ಭಾಗದಲ್ಲಿ ಬೈಂದೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ನಟ ಶಿವರಾಜ್ ಕುಮಾರ್ ಮಾತನಾಡಿ, ಸರಿಯಾದ ವ್ಯಕ್ತಿಗೆ ಯೋಚಿಸಿ ನಿಮ್ಮ ಮತ ಕೊಡಿ. ಹೊಸಬರಿಗೆ ಅವಕಾಶ ಕೊಡಿ. ಗೀತಾ ಗೆದ್ದರೆ ಖಂಡಿತ ಉತ್ತಮ ಕೆಲಸ ಮಾಡುವ ಬಗ್ಗೆ ನಾನೇ ಗ್ಯಾರಂಟಿ. ಆ ಬಗ್ಗೆ ನಂಬಿಕೆ ಇಡಿ. ನಾನು ನಟನಾಗಿ ಬಂದಿಲ್ಲ, ಗೀತ ಗಂಡನಾಗಿ ಮತ ಕೇಳಲು ಬಂದಿದ್ದು, ದಯವಿಟ್ಟು ಒಂದು ಬಾರಿ ಮತ ಕೊಟ್ಟು ಗೆಲ್ಲಿಸಿ ಎಂದು ಮನವಿ ಮಾಡಿಕೊಂಡರು.
ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ನಾಡ ಭಾಗದ ಬಡಾಕೆರೆ, ಮೊವಾಡಿ, ಮಾರಸ್ವಾಮಿ ಸೇತುವೆ ನಮ್ಮ ಕಾಂಗ್ರೆಸ್ ಸರಕಾರದ ಕೊಡುಗೆಯಾಗಿದೆ. ಬೈಂದೂರಿಗೆ ಸಂಸದರ ಕೊಡುಗೆಯೇನು? ಮರವಂತೆ ಬಂದರಿಗೆ ೮೫ ಕೋ.ರೂ ಅನುದಾನ ಬಿಡುಗಡೆಯಾಗಿ ೪ ವರ್ಷ ಆದರೂ ಕೇಂದ್ರದಿಂದ ಸಿಆರ್ಝಡ್ ಅನುಮತಿ ಕೊಡಿಸಲು ಸಾಧ್ಯವಾಗಿಲ್ಲ ಎಂದು ದೂರಿದ ಅವರು, ಅದನ್ನು ಆ ಕೆಲಸವನ್ನು ಈಗ ನಮ್ಮ ಮೀನುಗಾರಿಕಾ ಸಚಿವರು ಮಾಡುತ್ತಿದ್ದಾರೆ. ದೇವಾಡಿಗರ ಸಮುದಾಯ ಭವನಕ್ಕೆ ೧ ಕೋಟಿ ಕೊಡುವುದಾಗಿ ಹೇಳಿ ಮತ ಪಡೆದ ರಾಘವೇಂದ್ರ ಹಣ ಕೊಟ್ರಾ? ಶ್ರೀನಿವಾಸ ಪೂಜಾರಿ ಮಹಾನ್ ಸುಳ್ಳುಗಾರ. ಕೊಚ್ಚಕ್ಕಿ ಎಲ್ಲಿ ಹೋಯಿತು. ಅಂತವರ ಬಗ್ಗೆಯೂ ಎಚ್ಚರಿಕೆಯಿಂದ ಇರಬೇಕು ಎಂದರು.
ಮಾಜಿ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಮಾತನಾಡಿ, ಸಮಾಜದ ಕಟ್ಟಕಡೆಯ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಬಂಗಾರಪ್ಪರ ಪುತ್ರಿ ಇಂದು ನಮ್ಮ ಲೋಕಸಭಾ ಅಭ್ಯರ್ಥಿಯಾಗಿದ್ದು, ಅವರನ್ನು ಗೆಲ್ಲಿಸಿ. ನಿಮ್ಮೆಲ್ಲರ ಆಶೋತ್ತರಗಳನ್ನು ಖಂಡಿತ ಈಡೇರಿಸುವ ಪ್ರಯತ್ನ ಮಾಡುತ್ತಾರೆ ಎಂದ ಅವರು, ಅನೇಕ ರಸ್ತೆ, ಸೇತುವೆ ಆಗಿರುವುದು ನಾನು ಶಾಸಕನಾಗಿದ್ದಾಗ. ಸಂಸದರಲ್ಲ ಮಾಡಿರುವುದು. ಗಂಗೊಳ್ಳಿ ಸೇತುವೆ, ಬಂದರು, ಮರವಂತೆ ಬಂದರು ಯಾಕೆ ಸಂಸದರಿಗೆ ಮನವಿ ಕೊಟ್ಟರೂ ಆಗಿಲ್ಲ. ಪಾಪದವರಿಗೆ ತಿಂಗಳಿಗೆ ೨ ಸಾವಿರ ರೂ. ಕೊಟ್ಟರೆ ದಿವಾಳಿಯಾಗುತ್ತದೆ ಅನ್ನುವ ಬಿಜೆಪಿಯು ದೇಶದಲ್ಲಿ ೧೧ ಲಕ್ಷ ಕೋಟಿ ರೂ. ಅನ್ನು ಕಾರ್ಪೋರೇಟ್ ಕಂಪೆನಿಯವರಿಗೆ ಬಿಟ್ಟರೆ ದೇಶ ಉದ್ಧಾರ ಆಗುತ್ತಾ? ಎಂದು ಪ್ರಶ್ನಿಸಿದ ಅವರು, ಬಿಜೆಪಿ ಮೇಲ್ಜಾತಿಯವರನ್ನು ಸಂತುಷ್ಟಿಗೊಳಿಸುವ ಪಕ್ಷ. ಇದು ನನ್ನ ಅನಭವದ ಮಾತು ಎಂದರು.
ಪಕ್ಷದ ಮುಖಂಡರಾದ ಜಿ.ಎ. ಬಾವಾ, ಎಸ್. ರಾಜು ಪೂಜಾರಿ, ಬಾಬು ಹೆಗ್ಡೆ, ಶಂಕರ ಪೂಜಾರಿ, ಮದನ್ ಕುಮಾರ್, ಅರವಿಂದ ಪೂಜಾರಿ, ಅನಿಲ್, ಕೆನಡಿ ಪಿರೇರಾ, ರಮೇಶ್ ಶೆಟ್ಟಿ, ಸುಶೀಲಾ ದೇವಾಡಿಗ, ಡಿ.ಆರ್. ರಾಜು, ಮತ್ತಿತರರಿದ್ದರು.