ಉಡುಪಿ, ಏ 07 (DaijiworldNews/AA): ಬಹುನಿರೀಕ್ಷಿತ ಸಂತೆಕಟ್ಟೆ ಅಂಡರ್ ಪಾಸ್ ಯೋಜನೆಯ ಕೆಲಸವು ಹಲವು ತಿಂಗಳುಗಳಿಂದ ನಡೆಯುತ್ತಿದೆ. ಇದೀಗ ಈ ಯೋಜನೆಯ ಒಂದು ಭಾಗ ಕೊನೆಗೂ ಪೂರ್ಣಗೊಳ್ಳುವ ಹಂತದಲ್ಲಿದ್ದು, ಇನ್ನು ಒಂದು ಒಂದು ವಾರದಲ್ಲಿ ವಾಹನ ಸಂಚಾರ ಆರಂಭವಾಗುವ ನಿರೀಕ್ಷೆಯಿದೆ.
ಸಂತೆಕಟ್ಟೆ ಅಂಡರ್ ಪಾಸ್ ಕಾಮಗಾರಿಯು 2023ರ ಜನವರಿಯಲ್ಲಿ ಪ್ರಾರಂಭವಾಗಿತ್ತು. ಈ ಯೋಜನೆ ಪ್ರಾರಂಭವಾದ ಬಳಿಕ ಮಳೆಗಾಲದಲ್ಲಿ ಕೆಲವೆಡೆ ರಸ್ತೆ ಕುಸಿತ ಉಂಟಾಗಿತ್ತು. ಜನರ ಬಹು ಬೇಡಿಕೆಯಾದ ಈ ಅಂಡರ್ ಪಾಸ್ ಯೋಜನೆಯ ಕಾರ್ಯ ಪ್ರಾರಂಭವಾದಾಗಿನಿಂದ ಒಂದಲ್ಲಾ ಒಂದು ಸವಾಲುಗಳನ್ನು ಎದುರಿಸುತ್ತಲೇ ಇತ್ತು. 1 ಕಿ.ಮೀ ಉದ್ದದ ಈ ಅಂಡರ್ ಪಾಸ್ ಯೋಜನೆಗೆ 27.4 ಕೋಟಿ ರೂ.ಗಳ ವೆಚ್ಚವಾಗಿದೆ. ಈ ಯೋಜನೆಯು ಸ್ಥಳೀಯರಿಗೆ ಹಾಗೂ ಅಂಗಡಿ ಮಾಲೀಕರಿಗೆ ಅನಾನುಕೂಲತೆಯನ್ನುಂಟುಮಾಡುತ್ತದ.
ರಸ್ತೆಯ ಒಂದು ಬದಿಯ ಕೆಲಸವು ಅಂತಿಮ ಹಂತದಲ್ಲಿದೆ, ಮುಂದಿನ 10 ದಿನಗಳಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ಇದರಿಂದಾಗಿ ಸಂಚಾರದಟ್ಟಣೆ ಕಡಿಮೆಯಾಗಿ ವಾಹನ ಸವಾರರು ನಿರಾಳವಾಗಬಹುದಾಗಿದೆ ಎಂದು ಯೋಜನೆಯ ಮೇಲ್ವಿಚಾರಣೆ ನಡೆಸುತ್ತಿರುವ ಪ್ರಾಧಿಕಾರ ತಿಳಿಸಿದೆ.
ಇನ್ನು ಹೊಸದಾಗಿ ನಿರ್ಮಾಣವಾದ ಈ ಅಂಡರ್ ಪಾಸ್ ರಸ್ತೆಯಲ್ಲಿ ಒಂದೆಡೆ ಮಾತ್ರ ತಡೆಗೋಡೆಯಿದ್ದು, ಮತ್ತೊಂದೆಡೆ ತಡೆಗೋಡೆ ಇರುವುದಿಲ್ಲ. ಇದರಿಂದಾಗಿ ಜನರಲ್ಲಿ ಕಳವಳ ಉಂಟಾಗಿದೆ. ಅಂಡರ್ ಪಾಸ್ ರಸ್ತೆಯಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಮಾಡಲಾಗಿದ್ದು, ಒಂದು ವೇಳೆ ಮಳೆಯಿಂದಾಗಿ ನೀರು ಹೆಚ್ಚಾದರೆ ನೀರು ರಸ್ತೆಯಲ್ಲಿಯೇ ಉಕ್ಕಿ ಹರಿಯುವ ಆತಂಕ ಎದುರಾಗಿದೆ. ಜೊತೆಗೆ ರಸ್ತೆಯ ಒಂದು ಬದಿಯಲ್ಲಿ ದೊಡ್ಡ ಕಲ್ಲುಗಳು ಇದ್ದು, ಜನರಿಗೆ ಅಪಾಯ ಉಂಟಾಗುವ ಸಂಭವವಿದೆ. ಇನ್ನು ಸ್ಥಳೀಯ ಅಂಗಡಿ ಮಾಲೀಕರು ವ್ಯಾಪಾರ ಸುಗಮವಾಗಿ ಸಾಗಲು ಸರ್ವಿಸ್ ರಸ್ತೆಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ.