ಮಂಗಳೂರು, ಏ 06 (DaijiworldNews/AA): ಚುನಾವಣಾ ಕರ್ತವ್ಯದಲ್ಲಿ ನಿಯೋಜಿಸಲ್ಪಟ್ಟ ಸರ್ಕಾರಿ ನೌಕರರಿಗೆ ಅಂಚೆ ಮತ ಪತ್ರದ ಮೂಲಕ ಮತದಾನದ ಸೌಲಭ್ಯ ಒದಗಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಗೆ ಒಳಪಡುವ ಮತದಾರರಾಗಿದ್ದಲ್ಲೀ, ಅಂಚೆ ಮತ ಪತ್ರಕ್ಕಾಗಿ ನಮೂನೆ 12 ಎ ಅಲ್ಲಿ ಅರ್ಜಿ ಸಲ್ಲಿಸಬೇಕು. ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೊರ ಜಿಲ್ಲೆಯ ಮತದಾರರು ಆಗಿದ್ದಲ್ಲಿ ಅಂಚೆ ಮತ ಪತ್ರಕ್ಕಾಗಿ ನಮೂನೆ 12ರಲ್ಲಿ ಅರ್ಜಿ ಸಲ್ಲಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚನೆ ನೀಡಿದ್ದಾರೆ.
ಈಗಾಗಲೇ ಈ ಪ್ರಕ್ರಿಯೆ ಜಾರಿಯಲ್ಲಿದ್ದು, ಇನ್ನೂ ಕೆಲವು ಸಿಬ್ಬಂದಿಗಳು ಅರ್ಜಿ ಸಲ್ಲಿಸಿರುವುದಿಲ್ಲ. ಈ ಹಿಂದೆ ಸರ್ಕಾರಿ ನೌಕರರಿಗೆ ನೇರವಾಗಿ ಅಂಚೆ ಮೂಲಕ ಮತದಾನವನ್ನು ಮಾಡುವ ಅವಕಾಶವನ್ನು ಕಲ್ಪಿಸಲಾಗಿತ್ತು. ಪ್ರಸ್ತುತ ಚುನಾವಣೆಯಲ್ಲಿ ಆಯಾ ಕ್ಷೇತ್ರದ ವಿಧಾನಸಭಾ ವ್ಯಾಪ್ತಿಯ ಸೌಲಭ್ಯ ಕೇಂದ್ರದಲ್ಲಿ ಮಾತ್ರ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿರುತ್ತದೆ. ಬೇರೆ ಬೇರೆ ಜಿಲ್ಲೆಯ ಮತದಾರರಿಗೆ ಸಂಬಂಧಿಸಿದಂತೆ ಅಂಚೆ ಮತ ಪತ್ರಗಳನ್ನು ಅವರ ಜಿಲ್ಲೆಯ ಚುನಾವಣಾಧಿಕಾರಿ ಮೂಲಕ ಬೆಂಗಳೂರಿನಲ್ಲಿ ತೆರೆಯಲಾಗಿರುತ್ತದೆ. ಆಯಾ ಜಿಲ್ಲೆಯಲ್ಲಿ ಸೌಲಭ್ಯ ಕೇಂದ್ರದ ಮೂಲಕ ಅಂಚೆ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಒಂದು ವೇಳೆ ಅರ್ಜಿ ವಿಳಂಬವಾದಲ್ಲಿ ಮತಪತ್ರಗಳನ್ನು ಪಡೆಯುವುದು ಕಷ್ಟ ಸಾಧ್ಯವಾಗುವುದರಿಂದ ಸಿಬ್ಬಂದಿಗಳು ಅವರ ಜಿಲ್ಲೆಯ ಮೂಲ ಮತಗಟ್ಟೆಯಲ್ಲಿ ಮತ ಚಲಾಯಿಸಬೇಕು. ಅರ್ಜಿಗಳನ್ನು ಕಡ್ಡಾಯವಾಗಿ ಏ. 10 ರೊಳಗೆ ಅರ್ಜಿ ನಮೂನೆಯೊಂದಿಗೆ ಚುನಾವಣಾ ಕರ್ತವ್ಯದ ಆದೇಶದ ಪ್ರತಿ ಹಾಗೂ ವೋಟರ್ ಐಡಿ ಪ್ರತಿ ಯನ್ನು ಕಾರ್ಯನಿರ್ವಹಿಸುತ್ತಿರುವ ಸಂಬಂಧ ಪಟ್ಟ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿಗೆ ಸಲ್ಲಿಸಬೇಕು. ಜಿಲ್ಲಾ ಮಟ್ಟದ ಇಲಾಖೆಗಳ ಮುಖ್ಯಸ್ಥರು ಈ ಬಗ್ಗೆ ತಮ್ಮ ಸಿಬ್ಬಂದಿಗಳಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ತಿಳಿಸಿದ್ದಾರೆ.