ಉಳ್ಳಾಲ, ಏ 06 (DaijiworldNews/AA): ಜಿಲ್ಲೆ ಹಾಗೂ ರಾಜ್ಯದಾದ್ಯಂತ ಸುದ್ದಿ ಮಾಡಿದ್ದ ಪಂಜಿಮೊಗರು ತಾಯಿ ಹಾಗೂ ಮಗಳು ಕೊಲೆ ಪ್ರಕರಣದ ಮಗುವಿನ ತಂದೆ, ಮಹಿಳೆ ಪತಿ ಹಮೀದ್ ಎಂಬುವರಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಉಳ್ಳಾಲ ನಗರಸಭೆ ಸಮೀಪದ ಬಾಡಿಗೆ ಮನೆಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಮೂಲತಃ ಪಂಜಿಮೊಗರು ನಿವಾಸಿಯಾಗಿದ್ದ, ಸದ್ಯ ಉಳ್ಳಾಲ ನಗರಸಭೆ ಕಚೇರಿ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಹಮೀದ್ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಖ್ಯಾತ ಈಜುಪಟು ಜಾವೇದ್ ಎಂಬಾತ ಕೃತ್ಯ ಎಸಗಿದ್ದಾನೆ. ಹಾಗೂ ಹಣದ ವಿಚಾರವಾಗಿ ಕೃತ್ಯ ನಡೆದಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಉಳ್ಳಾಲ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಹಲ್ಲೆಗೊಳಗಾದ ಹಮೀದ್ ಎಂಬುವವರ ಪತ್ನಿ ರಜಿಯಾ ಮತ್ತು ಮಗಳು ಫಾತಿಮಾ ಜುವಾರನ್ನು 2011 ಜು. 28 ರಂದು ಮಧ್ಯಾಹ್ನ ಚೂರಿಯಿಂದ ತಿವಿದು ಹತ್ಯೆ ಮಾಡಲಾಗಿತ್ತು. ಈ ಹತ್ಯೆಯು ಪಂಜಿಮೊಗರು ಡಬಲ್ ಮರ್ಡರ್ ಎಂದು ಕರಾವಳಿಯಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ತಾಯಿ ಮಗಳ ಹತ್ಯೆಯಾಗಿ 13 ವರ್ಷ ಕಳೆದರೂ ಹತ್ಯೆ ಮಾಡಿದ ಆರೋಪಿಗಳು ಪತ್ತೆಯಾಗಿಲ್ಲ. ಸ್ಥಳೀಯ ಪೊಲೀಸರ ಜೊತೆ ಸಿಐಡಿ ತನಿಖೆ ನಡೆಸಿದರೂ ಆರೋಪಿಗಳನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಇನ್ನು ತಾಯಿ ಮಗಳ ಹತ್ಯೆಗೆ ಸಂಬಂಧಿಸಿದಂತೆ ಹಮೀದ್ ವಿರುದ್ದ ಆರೋಪ ಕೇಳಿ ಬಂದಿತ್ತು. ಪತಿ ಹಮೀದ್ ಮನೆಯಿಂದ ಹೊರ ಹೋದ 30 ನಿಮಿಷದ ಬಳಿಕ ರಜಿಯಾ ಮತ್ತು ಫಾತಿಮಾ ಜುವಾ ಹತ್ಯೆಯಾಗಿತ್ತು. ಆದರೆ ಸ್ಥಳೀಯ ಪೊಲೀಸರು ಹಾಗೂ ಸಿಐಡಿ ತನಿಖೆ ವೇಳೆ ಹಮೀದ್ ಕೈವಾಡ ಇಲ್ಲ ಎಂದು ಸಾಬೀತಾಗಿತ್ತು.