ಮಂಗಳೂರು, ಏ 06 (DaijiworldNews/AA): 25 ಲಕ್ಷ ರೂ. ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಮುಡಾ ಕಮಿಷನರ್ ಮನ್ಸೂರ್ ಅಲಿ ಹಾಗೂ ಬ್ರೋಕರ್ ಮುಹಮ್ಮದ್ ಸಲೀಂ ಅವರಿಗೆ ಮಂಗಳೂರಿನ ನ್ಯಾಯಾಲಯ ಜಾಮೀನು ನಿರಾಕರಿಸಿದೆ.
ಪ್ರಕರಣದ ಆರೋಪಿಗಳಾದ ಮುಡಾ ಕಮಿಷನರ್ ಮನ್ಸೂರ್ ಅಲಿ ಹಾಗೂ ಬ್ರೋಕರ್ ಮುಹಮ್ಮದ್ ಸಲೀಂ ಅವರು ನ್ಯಾಯಾಲಯಕ್ಕೆ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ನಡೆಸಿದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂಧ್ಯಾ ಎಸ್ ಅವರು, ಆರೋಪಿತರಿಗೆ ಜಾಮೀನು ನಿರಾಕರಿಸಿದ್ದಾರೆ.
ಮಾರ್ಚ್ 23 ರಂದು ಲೋಕಾಯುಕ್ತ ಪೊಲೀಸರು ಮನ್ಸೂರ್ ಅಲಿ ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಆತನ ಜೊತೆಗಿದ್ದ ಬ್ರೋಕರ್ ಮುಹಮ್ಮದ್ ಸಲೀಂ ಎಂಬಾತನನ್ನೂ ವಶಕ್ಕೆ ಪಡೆದಿದ್ದರು. ಬಳಿಕ ಆರೋಪಿತರಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಏ. 8ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ನಂತರ ಅಲಿ ಹಾಗೂ ಸಲೀಂ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.