ಬಂಟ್ವಾಳ, ಮೇ 1 (Daijiworld News/SM): ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನಿರಿಸಿ ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ಬಂಟ್ವಾಳ ನಗರ ಠಾಣಾ ಪೊಲೀಸರು ದಾಳಿ ನಡೆಸಿದ್ದು ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಅಕ್ಕಿ ಸಹಿತ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಾಹನ ಚಾಲಕ ಅಬ್ದುಲ್ ಸಲಾಂ ಹಾಗೂ ಅಬ್ದುಲ್ ಹಕೀಂ ಪ್ರಕರಣದ ಆರೋಪಿಗಳಾಗಿದ್ದಾರೆ.
ಬಿ ಮೂಡ ಗ್ರಾಮದ ಗೂಡಿನಬಳಿ ಇರುವ ಅಬ್ದುಲ್ ಹಕೀಂ ಎಂಬವರಿಗೆ ಸೇರಿದ ಕಟ್ಟಡದ ಸಮೀಪದಲ್ಲಿ ನಿಲ್ಲಿಸಲಾಗಿದ್ದ ವಾಹನದಲ್ಲಿ ಪಡಿತರ ಅಕ್ಕಿ ಮೂಟೆಗಳನ್ನು ತುಂಬಿಸಿಡಲಾಗಿತ್ತು ಎಂಬ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಅದರಂತೆ ದಾಳಿ ನಡೆಸಿದ ಪೊಲೀಸರು ಕಟ್ಟಡದಲ್ಲಿದ್ದ ಅಕ್ಕಿ ಮೂಟೆ ಸೇರಿದಂತೆ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸ್ ದಾಳಿ ಸಂದರ್ಭದಲ್ಲಿ ವಾಹನದಲ್ಲಿ 50 ಕೆಜಿ ತೂಕದ 60 ಚೀಲಗಳು ಹಾಗೂ ಅಂಗಡಿಯಲ್ಲಿ 50 ಕೆ.ಜಿ ತೂಕದ 27 ಬ್ಯಾಗ್ ಗಳು, 40 ಕೆ.ಜಿ ತೂಕದ 28 ಚೀಲಗಳು ಪತ್ತೆಯಾಗಿದ್ದು, ಅವುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.