ಕುಂದಾಪುರ, ಏ 05 (DaijiworldNews/AK): ಈ ಬಾರಿಯ ಲೋಕಸಭಾ ಚುನಾವಣೆ ಅಭಿವೃದ್ಧಿ ಆಧಾರಿತ ಚುನಾವಣೆಯಾಗಿ ಮೂಡಿಬರಲಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಸಾಲಿಗ್ರಾಮದಲ್ಲಿರುವ ಕೋಟ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಸಾಲಿಗ್ರಾಮ ಗ್ರಾಮಿಣಾ ಸಮಿತಿಯ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ,
ನಾನು ಸಂಸದ, ಸಚಿವ, ಶಾಸಕ ಆಗಿದ್ದೇ ಎನ್ನುವುದಕ್ಕಿಂತ ಆ ಅವಧಿಯಲ್ಲಿ ಎಷ್ಟು ಅಭಿವೃದ್ಧಿ ಕೆಲಸಗಳಾಗಿದೆ ಎಂಬುದರ ಮೂಲಕ ನಾನು ಮತದಾರರ ಮುಂದೆ ಬಂದಿದ್ದೇನೆ. ಶಾಸಕನಾಗಿ, ಸಚಿವನಾಗಿ, ಸಂಸದನಾಗಿ ಹಲವಾರು ಹುದ್ದೆಗಳನ್ನು ನಿಭಾಯಿಸಿ ಕೆಲಸ ಮಾಡಿದ್ದು ಕ್ಷೇತ್ರದ ಸಮಸ್ಯೆಗಳಿಗೂ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆಎಂದರು.
ನಾಯಕರ ಹೆಸರಿನಲ್ಲಿ ಮತವನ್ನು ಕೇಳಿ ಗೆದ್ದು ಬಂದರೆ ಅವರು ಮತ್ತೆ ಬರುವುದು 5 ವರ್ಷಗಳ ಬಳಿಕ. ಅಲ್ಲಿಯವರೆಗೆ ಮತದಾರರ ಕಡೆಗೆ ತಿರುಗಿಯೂ ನೋಡುವುದಿಲ್ಲ. ಆದುದರಿಂದ ನಿಮಗೆ ಮತದಾನದ ಮೂಲಕ ಆಯ್ಕೆ ಮಾಡುವಾಗಲೇ ಎಚ್ಚರವಹಿಸಿ ಮತದಾನ ಮಾಡಬೇಕಿದೆ ಎಂದರು.
ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ಪುಸ್ತಕದಲ್ಲಿ ಇಟ್ಟ ನವಿಲು ಗರಿ ಎಂದು ಲೇವಡಿ ಮಾಡಿದ್ದರು. ಆದರೆ ನಾವು ನುಡಿದಂತೆ ನಡೆದಿದ್ದೇವೆ. ಇದರಿಂದ ಅರ್ಥಿಕ ನಷ್ಟವಾಗುತ್ತದೆಂಬ ಬಿಜೆಪಿಯವರೇ, ಕೇಂದ್ರ ಸರಕಾರ 11 ಲಕ್ಷ ಕೋಟಿ ಉದ್ದಿಮೆದಾರರ ಸಾಲ ಮನ್ನಾ ಮಾಡಿದಾಗ ನಷ್ಟವಾಗಿಲ್ಲವೇ ಎಂದು ಪ್ರಶ್ನಿಸಿದರು.
ಈ ಸಂದರ್ಭ ಮಾತನಾಡಿದ ಕೆ. ಗೋಪಾಲ ಪೂಜಾರಿ, ಕೋಟ ಶ್ರೀನಿವಾಸ ಪೂಜಾರಿ ಕಲ್ಲಡ್ಕ ಪ್ರಭಾಕರ್ ಭಟ್ಟರ ಏಜೆಂಟ್. ಅಧಿಕಾರವಿದ್ದಾಗ ಬಿಲ್ಲವರ ಪರ ಕೆಲಸ ಮಾಡುವ, ಸಾಮಾಜಿಕ ನ್ಯಾಯ ಒದಗಿಸುವ ಕೆಲಸ ಮಾಡಿಲ್ಲ. ನನ್ನನ್ನು ಭಯೋತ್ಪಾದಕ ಎಂದು ಬೈಂದೂರು ಕ್ಷೇತ್ರಕ್ಕೆ ಬಂದು ಹೇಳಿಕೆ ನೀಡಿದರು. ನಾನು 30 ವರ್ಷದ ರಾಜಕಾರಣದಲ್ಲಿ ಯಾವುದೇ ಅನ್ಯಾಯದ ಕೆಲಸ ಮಾಡಿಲ್ಲ. ಮನೆ ಮಾರಿ, ಆಸ್ತಿ ಮಾರಿ ನಾನು ರಾಜಕಾರಣ ಮಾಡಿದ್ದೇನೆ. ಆದರೆ ಯಾವತ್ತೂ ನಾನು ಬಡವ, ಸರಳ ಎಂದು ಸುಳ್ಳು ಹೇಳುತ್ತಾ ತಿರುಗಿಲ್ಲ ಎಂದು ಕೋಟ ಶ್ರೀನಿವಾಸ ಪೂಜಾರಿಗೆ ಮಾತಿನಲ್ಲೇ ತಿವಿದರು.
ಕೋಟ ಬ್ಲಾಕ್ ಅಧ್ಯಕ್ಷ ಶಂಕರ್ ಎ ಕುಂದರ್ ರವರ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ಚುನಾವಣೆ ಸಂದರ್ಭದಲ್ಲಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಸರಕಾರದ ಗ್ಯಾರಂಟಿ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಸಭೆಯಲ್ಲಿ ಪುನರುಚ್ಚರಿಸಿದರಲ್ಲದೆ ಹಿಂದಿನ ಕಾಂಗ್ರಸ್ ಅವಧಿಯನ್ನು ಮತ್ತೆ ಪುನರಾವರ್ತನೆಗೋಳ್ಳಲಿದ್ದು ಜಯಪ್ರಕಾಶ್ ಹೆಗ್ಡೆಯವರು ಅತಿ ಹೆಚ್ಚು ಅಂತರದಲ್ಲಿ ಜಯಶಾಲಿಯಾಗಲಿದ್ದಾರೆ, ಈ ದಿಸೆಯಲ್ಲಿ ಕಾರ್ಯಕರ್ತರು ಕಾಂಗ್ರೆಸ್ ಸರಕಾರದ ಗ್ಯಾರಂಟಿ ಅನುಷ್ಠಾನವನ್ನು ಮನೆ ಮನೆಗೆ ತಿಳಿಹೇಳುವ ಕಾರ್ಯ ಆಗಲಿ ಎಂದು ಕರೆ ನೀಡಿದರು.
ದಿನೇಶ್ ಹೆಗ್ಡೆ ಮೊಳಹಳ್ಳಿ, ಸಾಲಿಗ್ರಾಮ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಅಮೀನ್, ಮಹಿಳಾ ಘಟಕದ ರೇಖಾ ಪಿ ಸುವರ್ಣ, ಮುಖಂಡರುಗಳಾದ ಪ್ರಕಾಶ್ಚಂದ್ರ ಶೆಟ್ಟಿ ಕಂಬದ ಕೋಣೆ, ತಿಮ್ಮ ಪೂಜಾರಿ, ರವೀಂದ್ರ ಕಾಮತ್ ಗುಂಡ್ಮಿ, ಗಣೇಶ್ ಬಡಹೋಳಿ, ಪುನೀತ್ ಪೂಜಾರಿ, ಜಹಿರಾ ಎಂ.ಎಸ್. ಸಂಜೀವ, ರಾಜೇಶ್ ಕೆ ನೆಲ್ಲಿಬೆಟ್ಟು, ದಿನೇಶ್ ಬಂಗೇರ, ಗೋಪಾಲ್ ಬಂಗೇರ, ಗಣೇಶ್ ಕೆ ನೆಲ್ಲಿಬೆಟ್ಟು, ಸುಜನ್ ಶೆಟ್ಟಿ, ನಾಗೇಂದ್ರ ಪುತ್ರನ್, ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು ,ಪಂಚಾಯತ್ ಸದ್ಯಸರು, ಕೆ ಜಯಪ್ರಕಾಶ್ ಹೆಗ್ಡೆ ಅವರ ಹಿತೈಷಿಗಳು, ಘಟಕದ ಅಧ್ಯಕ್ಷರು ಸದ್ಯಸರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.