ಮಂಗಳೂರು, ಏ 05 (DaijiworldNews/AA): 17- ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗವು ದಕ್ಷಿಣ ಕನ್ನಡ ಜಿಲ್ಲೆಗೆ ಚುನಾವಣಾ ವೀಕ್ಷಕರನ್ನು ನಿಯೋಜನೆ ಮಾಡಿದೆ. 17- ದಕ್ಷಿಣ ಕನ್ನಡ ಚುನಾವಣಾ ಸಾಮಾನ್ಯ ವೀಕ್ಷಕರಾಗಿ ಐಎಎಸ್ ಅಧಿಕಾರಿ ಕು. ಆಕಾಂಕ್ಷ ರಂಜನ್ ಅವರು ಬುಧವಾರದಂದು ಜಿಲ್ಲೆಗೆ ಆಗಮಿಸಿದ್ದಾರೆ.
ಚುನಾವಣಾ ಸಾಮಾನ್ಯ ವೀಕ್ಷಕರು, ಅಭ್ಯರ್ಥಿ ಹಾಗೂ ರಾಜಕೀಯ ಪಕ್ಷಗಳ ಚುನಾವಣಾ ಪ್ರಕ್ರಿಯೆ ಮೇಲೆ ನಿಗಾ ಇಡಲಿದ್ದು, ಅಭ್ಯರ್ಥಿ ಹಾಗೂ ರಾಜಕೀಯ ಪಕ್ಷಗಳ ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ದೂರು ಅಥವಾ ಅಹವಾಲುಗಳು ಇದ್ದಲ್ಲಿ ಸಾರ್ವಜನಿಕರು ಚುನಾವಣಾ ಸಾಮಾನ್ಯ ವೀಕ್ಷಕರಿಗೆ ಸಲ್ಲಿಸಬಹುದಾಗಿದೆ.
ಚುನಾವಣಾ ಸಾಮಾನ್ಯ ವೀಕ್ಷಕರ ಸಂಪರ್ಕ ವಿವರ:
ಮೊಬೈಲ್ ಸಂಖ್ಯೆ- 9482698817. ಸ್ಥಿರ ದೂರವಾಣಿ- 0824-2001594. ಇಮೇಲ್ ವಿಳಾಸ: generalobserverdk17@gmail.com ಆಗಿದೆ. ಚುನಾವಣಾ ಸಾಮಾನ್ಯ ವೀಕ್ಷಕರು ಕೇಂದ್ರ ಸ್ಥಾನದಲ್ಲಿರುವ ಸಂದರ್ಭದಲ್ಲಿ ಬೆಳಗ್ಗೆ 10 ರಿಂದ 11 ಗಂಟೆಯವರೆಗೆ ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಸಾರ್ವಜನಿಕರ ಸೇವೆಗೆ ಲಭ್ಯವಿರುತ್ತಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಂಸಿಎಂಸಿ ಸಮಿತಿಗೆ ಭೇಟಿ:
ಸಾಮಾನ್ಯ ವೀಕ್ಷಕರಾದ ಕು. ಆಕಾಂಕ್ಷ ರಂಜನ್ ಅವರು ಮಂಗಳೂರು ನಗರದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿರುವ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿ ಹಾಗೂ ಸಾಮಾಜಿಕ ಜಾಲತಾಣ ನಿರ್ವಹಣಾ ಸಮಿತಿ ಕಚೇರಿಗೆ ಭೇಟಿ ನೀಡಿ, ಅಲ್ಲಿನ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿದರು. ಹಾಗೂ ಕೆಲವು ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.