ಬೆಳ್ತಂಗಡಿ, ಏ 05 (DaijiworldNews/AA): ಮಹಿಳೆಯೊಬ್ಬರಿಗೆ ಫೇಸ್ಬುಕ್ ಆಪ್ ಮೂಲಕ ಸಾಲ ನೀಡುವುದಾಗಿ ಅಪರಿಚಿತರರು ನಂಬಿಸಿ ವಂಚನೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದಲ್ಲಿ ನಡೆದಿದೆ.
ವಂಚನೆಗೊಳಗಾದ ಮಹಿಳೆ ನೆಬಿಸಾ (38) ಅವರು ಈ ಬಗ್ಗೆ ವೇಣೂರು ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನಲ್ಲಿ ಮಾ. 21ರಂದು ಫೇಸ್ಬುಕ್ನಲ್ಲಿ ಮನಿ ವ್ಯೂ ಪರ್ಸನಲ್ ಲೋನ್ ಆಪ್ ಮೂಲಕ ಅಪರಿಚಿತರರು ಪರಿಚಯ ಮಾಡಿಕೊಂಡಿದ್ದಾರೆ. ಸಾಲದ ಬಗ್ಗೆ ಅಪರಿಚಿತರಿಂದ ಮಾಹಿತಿ ಪಡೆದ ನೆಬಿಸಾ ಅವರು 5 ಲಕ್ಷ ರೂ. ಸಾಲ ಪಡೆಯಲು ದಾಖಲೆಗಳನ್ನು ಕಳುಹಿಸಿದ್ದರು.
ನಂತರ ಫೋನ್ ಮೂಲಕ ನೆಬಿಸಾ ಅವರನ್ನು ಸಂಪರ್ಕಿಸಿದ ಅಪರಿಚಿತರರು ಮಾ. 28ರ ತನಕ ವಿವಿಧ ಹಂತದಲ್ಲಿ ಒಟ್ಟು 96,743 ರೂ. ಹಣವನ್ನು ಆನ್ ಲೈನ್ ಮೂಲಕ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಬಳಿಕ ಸಾಲವನ್ನು ನೀಡದೇ, ವರ್ಗಾಯಿಸಿಕೊಂಡ ಹಣವನ್ನು ಹಿಂತಿರುಗಿಸದೆ ವಂಚನೆಗೈದಿರುವುದಾಗಿ ತಿಳಿಸಲಾಗಿದೆ.