ಪಡುಬಿದ್ರಿ,ಏ 04(DaijiworldNews/AK): ಟೈಮಿಂಗ್ ಕುರಿತಾಗಿ ವಾಗ್ವಾದ ನಡೆದ ಬಳಿಕ ಬಸ್ಸನ್ನೇ ಹೆದ್ದಾರಿಗೆ ಅಡ್ಡವಾಗಿ ನಿಲ್ಲಿಸಿ ಬಸ್ ಚಾಲಕ ಬಸ್ ತಂಗುದಾಣದಲ್ಲಿ ವಿಶ್ರಾಂತಿ ಪಡೆದ ವಿಲಕ್ಷಣ ಘಟನೆ ಗುರುವಾರ ಅಪರಾಹ್ನ ಪಡುಬಿದ್ರಿಯಲ್ಲಿ ನಡೆದಿದೆ.
ಟೈಂ ಕೀಪರ್ ಶರತ್ ಹಾಗೂ ಉಡುಪಿ - ಮಂಗಳೂರು ನಡುವೆ ಸಂಚರಿಸುವ ಖಾಸಗಿ ಬಸ್ ಚಾಲಕ ಅಜೀಜ್ ಮಧ್ಯೆ ಟೈಮಿಂಗ್ ಕುರಿತಾಗಿ ನಡೆದಿದ್ದ ವಾಗ್ವಾದ ಮುಂದುವರಿದು ಪಡುಬಿದ್ರಿ ತಲುಪಿದ ಸರ್ವಿಸ್ ಬಸ್ ಎಂಎಂಎಸ್ಗೆ ಟೈಂ ಕೀಪರ್ ಶರತ್ ಅಡ್ಡ ನಿಂತಾಗ ಕುಪಿತಗೊಂಡ ಚಾಲಕ ಅಜೀಜ್ ತನ್ನ ಮಾಲಕರಿಗೆ ಕರೆ ಮಾಡಿ, ಬಳಿಕ ಬಸ್ಸನ್ನೇ ಹೆದ್ದಾರಿ ಅಡ್ಡವಾಗಿ ನಿಲ್ಲಿಸಿ ಬಸ್ ತಂಗುದಾಣದಲ್ಲಿ ವಿಶ್ರಾಂತಿ ಪಡೆದಿದ್ದಾನೆ.
ಈ ಕುರಿತಾಗಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರುಗಳು ದಾಖಲಾಗಿವೆ.
ಸುಮಾರು 5 ನಿಮಿಷಗಳ ಕಾಲ ನಡೆದಿದ್ದ ಈ ಪ್ರಹಸನದಲ್ಲಿ ಪಡುಬಿದ್ರಿ ಪೊಲೀಸರ ಮಧ್ಯಪ್ರವೇಶದವರೆಗೂ ಉಡುಪಿ – ಮಂಗಳೂರು ಏಕಮುಖ ರಸ್ತೆಯಲ್ಲಿ ಹೆದ್ದಾರಿ ವಾಹನ ಸಂಚಾರಕ್ಕೆ ತೊಡಕಾಗಿತ್ತು. ಇದೇ ಸಂದರ್ಭದಲ್ಲಿ ಸ್ಥಳದಲ್ಲಿ ಸೇರಿದ್ದ ಸಾರ್ವಜನಿಕರು ಮತ್ತು ಇತರ ವಾಹನ ಸವಾರರು ಚಾಲಕನ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದರು.