ಕಾಸರಗೋಡು, ಮೇ 1 (Daijiworld News/SM): ಏಪ್ರಿಲ್ 23ರಂದು ನಡೆದ ಲೋಕಸಭಾ ಲೋಕಸಭಾ ಚುನಾವಣೆಯಲ್ಲಿ ಕಾಸರಗೋಡು ಲೋಕಸಭಾ ಕ್ಷೇತ್ರದ ಹಲವಾರು ಮತಗಟ್ಟೆಗಳಲ್ಲಿ ನಕಲಿ ಮತದಾನವಾಗಿದ್ದು, ಈ ಬಗ್ಗೆ ಚುನಾವಾಣಾಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ.
ಕಲ್ಯಾಶ್ಯೇರಿಯ 69 ಮತ್ತು 79ನೇ ಮತಗಟ್ಟೆಯಲ್ಲಿ ಯುವಕರಿಬ್ಬರು ನಕಲಿ ಮತದಾನ ಮಾಡಿರುವುದು ಕಂಡುಬಂದಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತಗಟ್ಟೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲಾಯಿತು. ವೆಬ್ ಕಾಸ್ಟಿಂಗ್ ಪರಿಶೀಲಿಸಿದ ಜಿಲ್ಲಾಧಿಕಾರಿಯವರು ಮುಹಮ್ಮದ್ ಫಾಯಿಜ್ ಮತ್ತು ಆಶಿಕ್ ಎಂಬವರು ಎರಡೆರಡು ಬಾರಿ ಮತ ಚಲಾಯಿಸಿರುವುದನ್ನು ಖಚಿತ ಪಡಿಸಿದ್ದಾರೆ.
ಇನ್ನು ನಕಲಿ ಮತದಾನ ಮಾಡಿದ್ದಾನೆನ್ನಲಾದ ಫಾಯಿಜ್ ಮತ್ತು ಆಶಿಕ್ ಗುರುವಾರ ಕಾಸರಗೋಡು ಜಿಲ್ಲಾಧಿಕಾರಿ ಡಾ. ಸಜಿತ್ ಬಾಬು ರವರ ಮುಂಭಾಗದಲ್ಲಿ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಈ ನಡುವೆ ಜಿಲ್ಲೆಯ ಹಲವಾರು ಮತಗಟ್ಟೆಗಳಲ್ಲಿ ನಕಲಿ ಮತದಾನ ನಡೆದ ಬಗ್ಗೆ ಚುನಾವಣಾಧಿಕಾರಿಗೆ ದೂರುಗಳು ಲಭಿಸಿದೆ.
ಪಿಲಾತ್ತರದ ಮತಗಟ್ಟೆಯಲ್ಲಿ ಬಾರೀ ಪ್ರಮಾಣದ ನಕಲಿ ಮತದಾನ ವಾಗಿರುವುದಾಗಿ ಕಾಂಗ್ರೆಸ್ ದೂರು ನೀಡಿತ್ತು. ದೂರು ಲಭಿಸಿದ ಎಲ್ಲಾ ಮತಗಟ್ಟೆಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದ್ದು, ತಪ್ಪು ಕಂಡು ಬಂದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.