ಉಡುಪಿ, ಏ 04(DaijiworldNews/AA): ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಎರಡು ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಇವೆರಡರ ಅಭ್ಯರ್ಥಿಗಳಾದ ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ಜಯಪ್ರಕಾಶ್ ಹೆಗ್ಡೆ ಅವರು ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇಬ್ಬರೂ ಅಭ್ಯರ್ಥಿಗಳು ಕೋಟ್ಯಾಧಿಪತಿಗಳೆಂದು ಅವರಿಬ್ಬರು ಸಲ್ಲಿಸಿದ ಅಧಿಕೃತ ಅಫಿಡವಿಟ್ ನಿಂದಾಗಿ ತಿಳಿದುಬಂದಿದೆ.
ಕೋಟ ಶ್ರೀನಿವಾಸ ಪೂಜಾರಿ ಬಳಿ 31,95,082 ಚರಾಸ್ತಿ, ಪತ್ನಿ ಶಾಂತಾ ಬಳಿ 10,29,027 ರೂ. ಹಾಗೂ ಮೂವರು ಮಕ್ಕಳ ಬಳಿ 21,06,401 ರೂ. ಚರಾಸ್ತಿ, ಕೋಟ ಶ್ರೀನಿವಾಸ ಪೂಜಾರಿ ಅವರ ಸ್ಥಿರಾಸ್ತಿ ಮೌಲ್ಯ 79,95,082 ರೂ., ಅವರ ಪತ್ನಿ ಶಾಂತಾ ಅವರ ಸ್ಥಿರಾಸ್ತಿ 1,62,79,027 ರೂ., ಮೂವರು ಮಕ್ಕಳ ಸ್ಥಿರಾಸ್ತಿ ಮೌಲ್ಯ 51,96,401 ರೂ. ಚರಾಸ್ತಿ ಮತ್ತು ಸ್ಥಿರಾಸ್ತಿಗಳ ಒಟ್ಟು ಮೌಲ್ಯ 3,58,91,020 ರೂ. ಇದೆ ಎಂದು ಅಫಿಡವಿಟ್ ನಿಂದಾಗಿ ತಿಳಿದುಬಂದಿದೆ. ಹಾಗೂ ಕೋಟ ಶ್ರೀನಿವಾಸ ಪೂಜಾರಿ ಅವರ ಆಸ್ತಿ 40,64,924 ರೂ., ಅವರ ಪತ್ನಿ 35,43,757 ರೂ., ಪುತ್ರ 28,35,964 ರೂ. ಆಗಿದೆ.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರ ಒಟ್ಟು ಮೌಲ್ಯ 15,34,42,637 ರೂ. ಜೆ.ಪಿ.ಹೆಗ್ಡೆ ಅವರ ಚರಾಸ್ತಿ ಮೌಲ್ಯ 3,53,43,260 ರೂ., ಅವರ ಪತ್ನಿ 81,46,544 ರೂ. ಆಗಿದೆ. ಜೆ.ಪಿ.ಹೆಗ್ಡೆ ಅವರು 13,12,61,587 ರೂ. ಸ್ಥಿರಾಸ್ತಿ ಹೊಂದಿದ್ದಾರೆ. ಅವರ ಪತ್ನಿ 1,05,00,180 ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಜಯಪ್ರಕಾಶ್ ಹೆಗ್ಡೆ ಅವರು ಖಾಸಗಿ ಸಂಸ್ಥೆಯಿಂದ ಗುತ್ತಿಗೆ ಪಡೆದ ಹಣಕ್ಕಾಗಿ 15,00,000 ರೂ.ಗಳ ಹೊಣೆಗಾರಿಕೆಯನ್ನು ಹೊಂದಿದ್ದಾರೆ.
ಇನ್ನು ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ಜಯಪ್ರಕಾಶ್ ಹೆಗ್ಡೆ ಅವರಿಬ್ಬರ ವಿರುದ್ಧ ಮತ್ತು ಅವರಿಬ್ಬರ ಪತ್ನಿಯರ ವಿರುದ್ಧವೂ ಯಾವುದೇ ಕ್ರಿಮಿನಲ್ ದೂರುಗಳು ದಾಖಲಾಗಿರುವುದಿಲ್ಲ ಎಮದು ತಿಳಿದುಬಂದಿದೆ.