ಕಾರ್ಕಳ, ಏ 03(DaijiworldNews/AA): ಕಡುಬೇಸಿಗೆ ಎದುರಾಗಿದ್ದು ಎಲ್ಲೆಡೆ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಈ ಕಾಲಘಟ್ಟದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಗುತ್ತಿಗೆದಾರರ ಬೇಜವಬ್ದಾರಿತನದಿಂದಾಗಿ ನೀರು ಸರಬರಾಜು ಮಾಡುವ ಪೈಪ್ ಲೈನ್ ತುಂಡರಿಸಿ ಹೋಗಿದ್ದು, ಭಾರೀ ಪ್ರಮಾಣದಲ್ಲಿ ಕುಡಿಯುವ ನೀರು ಪೋಲಾಗುತ್ತಿರುವ ಘಟನೆ ಕಾರ್ಕಳ ಸಾಣೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಈ ಕುರಿತು ಸಾಮಾಜಿಕ ಹೋರಾಟಗಾರ ಸಾಣೂರು ನರಸಿಂಹ ಕಾಮತ್ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವನ್ನು ಹರಿಬಿಟ್ಟು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಗುತ್ತಿಗೆದಾರನ ವಿರುದ್ಧ ಆಕ್ರೋಶ ಹೊರ ಹಾಕಿ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದರು. ಹಾಗೂ ಸ್ಥಳೀಯ ರಿಜೆನ್ಸಿ ಹಾಲ್ ನ ಮಾಲಕ ರಮೇಶ್ ಸಾಲ್ಯಾನ್ ರವರು ತಮ್ಮ ನೀರು ಸಂಪರ್ಕದ ಪೈಪ್ ಲೈನ್ ಅನ್ನು ಸ್ವಂತ ಖರ್ಚು ಭರಿಸಿ ದುರಸ್ಥಿ ಮಾಡಿಸಿರುತ್ತಾರೆ.
ಇಷ್ಟೊಂದು ನಿರ್ಲಕ್ಷ್ಯ ಯಾಕೆ?
ಸಾಣೂರು ಪರಿಸರದಲ್ಲಿ ಅಗ್ಗಿಂದಾಗೆ ಸಾರ್ವಜನಿಕ ಕುಡಿಯುವ ನೀರಿನ ಪ್ರಮುಖ ಪೈಪ್ ಅನ್ನು ರಸ್ತೆ ಅಭಿವೃದ್ಧಿ ಕಾಮಗಾರಿಯ ಸಂದರ್ಭದಲ್ಲಿ ಒಡೆದು ಹಾಕಲಾಗುತ್ತದೆ. ದುರಸ್ಥಿ ಕಾಮಗಾರಿಯನ್ನು ನಡೆಸದೇ ಹಾಗೆಯೇ ಬಿಟ್ಟುಹೋಗುವುದರಿಂದ ಕನಿಷ್ಠ ಒಂದುವಾರಗಳ ಕಾಲ ಸ್ಥಳೀಯ ನಾಗರಿಕರಿಗೆ ಕುಡಿಯುವ ನೀರು ಸರಬರಾಜು ಆಗುವುದಿಲ್ಲ. ಈ ಕುರಿತು ಸ್ಥಳೀಯ ನಾಗರಿಕರು, ಸ್ಥಳೀಯಾಡಳಿತ ಮುಖಾಂತರ ಹಲವು ಭಾರಿ ಸಂಬಂಧ ಪಟ್ಟವರ ಗಮನಕ್ಕೆ ತಂದರೂ ಚಿಕ್ಕಾಸು ಬೆಲೆ ನೀಡುತ್ತಿಲ್ಲ ಎಂಬ ಆರೋಪವು ಕೇಳಿಬರುತ್ತದೆ.
ಉಡುಪಿ ಜಿಲ್ಲಾಡಳಿತ ಈ ಕೂಡಲೇ ಕ್ರಮ ಕೈಗೊಳ್ಳಬೇಕು. ನಾಗರಿಕರ ಮೂಲ ಸೌಕರ್ಯ ಕಸಿಯುವ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಗುತ್ತಿಗೆದಾರನ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.