ಬೈಂದೂರು,ಏ 02(DaijiworldNews/AK): ಶಿವಮೊಗ್ಗ ಲೋಕಸಭಾ ಕ್ಷೇತ್ರದೊಳಗೆ ಬರುವ ಬೈಂದೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ಸ್ಪಷ್ಟ ಕಲ್ಪನೆಯಿದೆ. ಈಗಾಗಲೇ ಮೀನುಗಾರಿಕೆ, ಪ್ರವಾಸೋದ್ಯಮ, ರಸ್ತೆ, ಶಾಲಾ, ಕಾಲೇಜು ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ 687 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಮುಂದೆಯೂ ಇನ್ನಷ್ಟು ಅಭಿವೃದ್ಧಿ ಕಾರ್ಯ ನಡೆಸಲಾಗುವುದು ಎಂದು ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಹೇಳಿದರು.
ಬೈಂದೂರಿನ ಜೆಎನ್ಆರ್ ಸಭಾಭವನದಲ್ಲಿ ಮಂಗಳವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲ ಜಾತಿ, ಜನಾಂಗಳ ಅಭಿವೃದ್ಧಿಗೂ ಒತ್ತು ನೀಡಲಾಗಿದೆ ಮತ್ತು ಮುಂದೆಯೂ ನೀಡಲಾಗುವುದು. ವಿಶೇಷವಾಗಿ ಮುಂದಿನ ದಿನಗಳಲ್ಲಿ ಯುವಕರಿಗೆ ಸ್ಥಳೀಯವಾಗಿಯೇ ಇನ್ನಷ್ಟು ಉದ್ಯೋಗ ಸೃಷ್ಟಿಗೂ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಈ ಬಾರಿ ಬೈಂದೂರು ಕ್ಷೇತ್ರದಿಂದಲೇ 1 ಲಕ್ಷಕ್ಕೂ ಅಧಿಕ ಲೀಟ್ ಬರುವ ನಿರೀಕ್ಷೆಯಿದೆ. ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಕ್ಕಾಗಿ ಪ್ರಧಾನಿ ಮೋದಿಯವರೊಂದಿಗೆ ಮಾತನಾಡಿ ಹೆಚ್ಚೆಚ್ಚು ಅನುದಾನವನ್ನು ತರಲಾಗುವುದು. ಅಷ್ಟು ಮಾತ್ರವಲ್ಲದೇ ಇಲ್ಲಿನ ಜನತೆ ಪಕ್ಷ, ಪ್ರಧಾನಿಯವರ ಮೇಲಿಟ್ಟಿರುವ ವಿಶ್ವಾಸವನ್ನು ಅವರಿಗೆ ತಿಳಿಸಿ ಮುಂದಿನ ಐದು ವರ್ಷಗಳಲ್ಲಿ ಒಮ್ಮೆಯಾದರೂ ಬೈಂದೂರು ಕ್ಷೇತ್ರಕ್ಕೆ ಮೋದಿಯವರನ್ನು ಕರೆದುಕೊಂಡು ಬರಲಿದ್ದೇನೆ ಎಂದು ಹೇಳಿದರು.
ಉದ್ಯೋಗ ಸೇರಿದಂತೆ ವಿವಿಧ ಕಾರಣಕ್ಕಾಗಿ ರಾಜಧಾನಿ ಬೆಂಗಳೂರಿನಲ್ಲಿರುವ ಕ್ಷೇತ್ರದ ಮತದಾರರ ಸಭೆಯನ್ನು ಏಪ್ರಿಲ್ 14ರ ಸಂಜೆ 4 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದು, ಬಿಜೆಪಿ, ಜೆಡಿಎಸ್ ಮುಖಂಡರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಿಮ್ಮ ಮನೆಯಿಂದ ಯಾರಾದರೂ ಬೆಂಗಳೂರಿನಲ್ಲಿದ್ದರೆ ಅವರಿಗೂ ಮಾಹಿತಿ ನೀಡಿ ಎಂದು ಕೋರಿಕೊಂಡರು.
ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಏಪ್ರಿಲ್ 18ರಂದು ಶಿವಮೊಗ್ಗದಲ್ಲಿ ನಾಮಪತ್ರ ಸಲ್ಲಿಸಲಿದ್ದೇನೆ. ಪಕ್ಷದ ನಾಯಕರು ಉಪಸ್ಥಿತರಲಿದ್ದಾರೆ. ನೀವೆಲ್ಲರೂ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ಶಾಸಕರಾದ ಗುರುರಾಜ ಗಂಟಿಹೊಳೆ, ಮಂಡಲ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು, ಪ್ರಮುಖರು ಉಪಸ್ಥಿತರಿದ್ದರು.