ಮಂಗಳೂರು: ಕೆವೈಸಿ ಸ್ಕ್ಯಾಮ್; 'ಕೆನರಾ ಬ್ಯಾಂಕ್' ಹೆಸರಲ್ಲಿ ಕರೆ ಮಾಡಲು ಬಂದ ಕಳ್ಳ ಸಿಕ್ಕಿಬಿದ್ದ!
Mon, Apr 01 2024 12:35:59 PM
ಮಂಗಳೂರು, ಏ 01(DaijiworldNews/AA): ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ಮೂಲಕ ವಂಚನೆ ಮಾಡುವವರು ಹಾಗೂ ವಂಚನೆಗೊಳಗಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ದಿನದಿಂದ ದಿನಕ್ಕೆ ಪ್ರಕರಣಗಳೂ ಹೆಚ್ಚು ಹೆಚ್ಚು ದಾಖಲಾಗುತ್ತಿವೆ. ಆನ್ ಲೈನ್ ವಂಚನೆಯ ಬಗ್ಗೆ ಜನರಿಗೆ ಪೊಲೀಸ್ ಇಲಾಖೆ ಸಾಕಷ್ಟು ಜಾಗೃತಿ ಮೂಡಿಸಿದರೂ ಜನ ವಂಚನೆಗೊಳಗಾಗುವುದು ತಪ್ಪುತ್ತಿಲ್ಲ. ಆನ್ ಲೈನ್ ಮೂಲಕ ವಂಚನೆ ಹೇಗೆ ಮಾಡುತ್ತಾರೆ? ಒಂದು ವೇಳೆ ವಂಚನೆಗೊಳಗಾದರೆ ಮುಂದೇನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.
ಇತ್ತೀಚೆಗೆ ದಾಯ್ಜಿವರ್ಲ್ಡ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ವಾಲ್ಟರ್ ನಂದಳಿಕೆ ಅವರ ಮೊಬೈಲ್ ಗೆ ಕೆನರಾ ಬ್ಯಾಂಕ್ ಹೆಸರಿನಿಂದ ಅನುಮಾನಾಸ್ಪದ ಸಂದೇಶವೊಂದು ಬಂದಿದೆ. ಕೆವೈಸಿ ಅಪ್ ಡೇಟ್ ಮಾಡುವಂತೆ ಈ ಸಂದೇಶದಲ್ಲಿ ತಿಳಿಸಲಾಗಿದ್ದು, ಅಪ್ ಡೇಟ್ ಮಾಡಲು ಸಂಪರ್ಕಿಸಲು ಫೋನ್ ನಂಬರ್ ಒಂದನ್ನು ಕೂಡ ಕಳುಹಿಸಲಾಗಿತ್ತು.
ನಂದಳಿಕೆಯವರು ಕೆನರಾ ಬ್ಯಾಂಕ್ ಅಕೌಂಟ್ ಹೊಂದಿರದೇ ಇದ್ದರೂ, ಕೆವೈಸಿ ಅಪ್ಡೇಟ್ ಮಾಡೋ ನೆಪದಲ್ಲಿ ವಂಚಕ ಕರೆ ಮಾಡಿದ್ದ. ಕರೆ ಮಾಡಿದ ವ್ಯಕ್ತಿಯು ಕೆನರಾ ಬ್ಯಾಂಕ್ ನ ಪ್ರತಿನಿಧಿ ಎಂದು ಕನ್ನಡದಲ್ಲಿ ಮಾತನಾಡುತ್ತಾ ಬ್ಯಾಂಕ್ ಡಿಟೇಲ್ಸ್ ಕೇಳಿದ್ದ. ಆದರೆ ಇತ್ತ ಕಡೆಯಿಂದ ವಂಚಕನ ಹೆಸರು, ಶಾಖೆಯ ವಿವರ ಕೇಳಿದಾಗ, ಎಚ್ಚೆತ್ತುಕೊಂಡ ವಂಚಕ ಕರೆಯನ್ನು ಕಡಿತ ಮಾಡಿದ್ದ. ಈತ ಕರೆ ಮಾಡಿದ ಸಂಖ್ಯೆ ಟ್ರೂಕಾಲರ್ ನಲ್ಲೂ "ಸ್ಪ್ಯಾಮ್ ನಂಬರ್" ಎಂದು ತೋರಿಸದೇ ಕೆನರಾ ಬ್ಯಾಂಕ್ನ ಅಸಲಿ ಲೋಗೋ ಜೊತೆಗೆ ಪ್ರದರ್ಶನಗೊಂಡಿತ್ತು.
ಸೈಬರ್ ವಂಚನೆಗೊಳಗಾದ ಸಂದರ್ಭ ಸಹಾಯವಾಣಿ ಸಂಖ್ಯೆ 1930 ಅನ್ನು ಸಂಪರ್ಕಿಸಬಹುದು ಅಥವಾ ಯಾವುದೇ ಅನುಮಾನಾಸ್ಪದ ಕರೆಗಳು ಬಂದಾಗ ಆ ಮೊಬೈಲ್ ಸಂಖ್ಯೆಯನ್ನು https://cybercrime.gov.in/ ನಲ್ಲಿ ರಿಪೋರ್ಟ್ ಮಾಡಬಹುದು.
ಈ ಘಟನೆ ಪ್ರತಿಯೊಬ್ಬರಿಗೂ ಎಚ್ಚರಿಕೆಯ ಸಂದೇಶವಾಗಿದೆ. ಅದರಲ್ಲೂ ವಿಶೇಷವಾಗಿ ಹಣಕಾಸಿನ ವಿಷಯಗಳಿಗೆ ಸಂಬಂಧಿಸಿದಂತೆ ಅಪರಿಚಿತ ಕರೆ ಹಾಗೂ ಮೆಸೇಜ್ ಜಾಗರೂಕತೆಯಿಂದ ವ್ಯವಹರಿಸಬೇಕು. ಯಾವುದೇ ಕಾರಣಕ್ಕೂ ಬ್ಯಾಂಕ್ ಖಾತೆ ವಿವರ, ಓಟಿಪಿಯಂತಹ ಗೌಪ್ಯ ಮಾಹಿತಿ ಹಂಚಿಕೊಳ್ಳಬಾರದು. ಹಣ ಕಳೆದುಕೊಂಡು ಪಶ್ಚಾತ್ತಾಪ ಪಡುವುದಕ್ಕಿಂತ, ಮುನ್ನೆಚ್ಚರಿಕೆ ವಹಿಸುವುದು ಸೂಕ್ತ.