ಉಡುಪಿ, ಮೇ01(Daijiworld News/SS): ಪ್ರಕೃತಿ ಚಿಕಿತ್ಸೆಗಾಗಿ ಉಡುಪಿಯ ಸಾಯಿರಾಧಾ ರೆಸಾರ್ಟ್ನಲ್ಲಿ ಮೂರು ದಿನಗಳಿಂದ ವಾಸ್ತವ್ಯ ಹೂಡಿರುವ ಸಿಎಂ ಎಚ್.ಡಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೆ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿದೆ.
ಈ ವೇಳೆ ಭದ್ರತೆಗೆ ನಿಯೋಜಿಸಲಾಗಿದ್ದ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮದವರ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮಾಧ್ಯಮದವರ ಮೇಲೆ ದರ್ಪ ತೋರಿದ ಪೊಲೀಸ್ ಅಧಿಕಾರಿ, ಅವಾಚ್ಯ ಶಬ್ದ ಬಳಸಿ ಮಾಧ್ಯಮದವರನ್ನು ನಿಂದಿಸಿದ್ದಾರೆ ಎನ್ನಲಾಗಿದೆ.
ಎಸ್ಐ ಅಬ್ದುಲ್ ಖಾದರ್ ಮಾಧ್ಯಮಗಳ ಕ್ಯಾಮರಾದವರನ್ನು ದೂಡಿ ದರ್ಪ ತೋರಿಸಿದ ಪೊಲೀಸ್ ಅಧಿಕಾರಿ ಎಂದು ತಿಳಿದುಬಂದಿದೆ.
ಮಾತ್ರವಲ್ಲ, ಇಲ್ಲಿರುವ ಪೊಲೀಸರು ರೆಸಾರ್ಟ್ ಸುತ್ತಲಿರುವ ಮನೆಯವರ ಮೇಲೂ ದಬ್ಬಾಳಿಕೆ ನಡೆಸುತ್ತಿದ್ದು, ಅಕ್ಕ ಪಕ್ಕದ ಮನೆಯವರಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವು ಕೇಳಿ ಬರುತ್ತಿದೆ. ಮಾಧ್ಯಮದವರಿಗೆ ಮನೆಯವರಿಗೆ ಆಶ್ರಯ ನೀಡದಂತೆ ತಿಳಿಸಿದ್ದು, ಸಾರ್ವಜನಿಕರು ರಸ್ತೆಯಲ್ಲಿ ನಿಲ್ಲದಂತೆ ತೊಂದರೆ ನೀಡುತ್ತಿದ್ದಾರೆ ಎನ್ನಲಾಗಿದೆ.
ಪೊಲೀಸರು ಖಾಸಗಿ ಜಾಗಕ್ಕೆ ತೆರಳಿ ಮನೆಯ ದಾಖಲೆಗಳನ್ನೆಲ್ಲ ಕೇಳುತ್ತಿದ್ದು, ಕಾಪು ಎಸ್ಐ ನವೀನ್ ಎಸ್ ನಾಯ್ಕ ಎಂಬುವರು ಮಹಿಳೆಯೊಬ್ಬರೇ ಮನೆಯಲ್ಲಿದ್ದಾಗ ಬಂದು ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಈ ನಡುವೆ ಸಿಎಂ ವಾಸ್ತವ್ಯದ ಹಿನ್ನೆಲೆ ರೆಸಾರ್ಟ್ ಸುತ್ತ ಭದ್ರತೆ ಹೆಚ್ಚಿಸಿದ್ದು, ಇಂದು 2ನೇ ಹಂತದಲ್ಲಿ ರೆಸಾರ್ಟ್ಗೆ ಪರದೆ ಅಳವಡಿಸಲಾಗಿದೆ. ರೆಸಾರ್ಟ್ನ ಚಲನವಲನ ಕ್ಯಾಮರಾ ಕಣ್ಣಿಗೆ ಬೀಳದಂತೆ ಕ್ರಮ ಕೈಗೊಳ್ಳಲಾಗಿದ್ದು, ರೆಸಾರ್ಟ್ ಒಳಗಡೆ ಅಲ್ಲಿನ ಸಿಬ್ಬಂದಿಗೂ ಮೊಬೈಲ್ ನಿಷೇಧಿಸಲಾಗಿದೆ.
ಉಡುಪಿಯ ಸಾಯಿರಾಧಾ ರೆಸಾರ್ಟ್ನಲ್ಲಿನ ಯಾವುದೇ ಮಾಹಿತಿ ಹೊರ ಹೋಗದಂತೆ ಸಿಎಂ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.