ಪುತ್ತೂರು, ಮಾ 31(DaijiworldNews/AA): ವೈದ್ಯರೊಬ್ಬರು ಸಾಮಾಜಿಕ ಜಾಲತಾಣದ ಮೂಲಕ ಲಕ್ಷಾಂತರ ರೂ. ವಂಚನೆಗೊಳಗಾದ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಪುತ್ತೂರು ನಗರದ ವೈದ್ಯರಾದ ಬೊಳ್ವಾರು ನಿವಾಸಿ ಡಾ.ಚಿದಂಬರ ಅಡಿಗ ಎಂಬವರು ವಂಚನೆಗೆ ಒಳಗಾದವರು.
ಡಾ.ಚಿದಂಬರ ಅಡಿಗ ಅವರಿಗೆ ಮಾ.28 ರಂದು ಅಪರಿಚಿತ ವ್ಯಕ್ತಿಯಿಂದ ದೂರವಾಣಿ ಕರೆಯೊಂದು ಬಂದಿದೆ. ಅಡಿಗ ಅವರು ಕರೆ ಸ್ವೀಕರಿಸಿದಾಗ, ಕರೆ ಮಾಡಿದ ವ್ಯಕ್ತಿಯು ನಾನು ದೆಹಲಿಯಿಂದ ಪೊಲೀಸ್ ಮಾತನಾಡುತ್ತಿರುವುದಾಗಿ ತಿಳಿಸಿದ್ದಾನೆ. ಬಳಿಕ ನಿಮ್ಮ ಮೇಲೆ ದೆಹಲಿಯಲ್ಲಿ ಮಾದಕ ವಸ್ತುವಿಗೆ ಸಂಬಂಧಿಸಿದಂತೆ, ಅಕ್ರಮ ಹಣ ಹೊಂದಿರುವ ಬಗ್ಗೆ ಮತ್ತು ಮಾನವ ಕಳ್ಳ ಸಾಗಾಣಿಕ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾನೆ.
ನಂತರ ಕರೆ ಮಾಡಿದ ವ್ಯಕ್ತಿಯು ನಿಮ್ಮನ್ನು ಬಂಧಿಸಲು ಕೋರ್ಟ್ ನಿಂದ ವಾರಂಟ್ ಎಂದು ಹೇಳಿ, ನೀವು ದೆಹಲಿಯ ಸಿಬಿಐ ಕೋರ್ಟ್ ಗೆ ಹಾಜರಾಗಬೇಕು. ಒಂದು ವೇಳೆ ನಿಮಗೆ ಇಲ್ಲಿಗೆ ಬರಲು ಆಗದಿದ್ದರೆ ಈಗ ಆನ್ ಲೈನ್ ಮೂಲಕ ಕೋರ್ಟ್ ನ ಪ್ರಕರಣ ನಡೆಸುತ್ತೇವೆ. ನೀವು ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿದ್ದ ಹಣವನ್ನು ನಾನು ಹೇಳುವ ಅಕೌಂಟ್ ನಂಬರ್ ಗೆ ವರ್ಗಾಯಿಸಬೇಕು. ನಿಮ್ಮ ಕೋರ್ಟ್ ಕೇಸ್ ಮುಗಿದ ಬಳಿಕ ನಿಮಗೆ ನಿಮ್ಮ ಹಣ ಮರಳಿ ದೊರೆಯುತ್ತದೆ. ಇಲ್ಲವಾದಲ್ಲಿ ನಿಮ್ಮ ಮನೆಗೆ ಬಂದು ನಿಮ್ಮನ್ನು ಬಂಧಿಸುತ್ತೇವೆ ಎಂದು ತಿಳಿಸಿದ್ದಾನೆ.
ಇನ್ನು ಅಪರಿಚಿತ ವ್ಯಕ್ತಿಯು ದೂರುದಾರರ ವಿರುದ್ಧ ದೆಹಲಿಯಲ್ಲಿ ಪ್ರಕರಣ ದಾಖಲಾಗಿರುವಂತೆ ಬಿಂಬಿಸುವ ಕೆಲವೊಂದು ದಾಖಲೆಗಳನ್ನು ಅಡಿಗ ರವರ ಮೊಬೈಲ್ ಫೋನ್ ನ ವಾಟ್ಸ್ ಆಪ್ ಗೆ ಕಳುಹಿಸಿರುವುದಾಗಿ ತಿಳಿಸಿದ್ದಾನೆ. ಅಪರಿಚಿತನ ಮಾತನ್ನು ನಂಬಿ, ಗಾಬರಿಗೊಂಡು, ಡಾ.ಚಿದಂಬರ ಅಡಿಗ ಅವರು ಬ್ಯಾಂಕ್ ಖಾತೆಯಿಂದ, ಆರ್ ಟಿಜಿಎಸ್ ಮೂಲಕ ಸದರಿ ಅಪರಿಚಿತ ತಿಳಿಸಿದ ಬ್ಯಾಂಕ್ ಖಾತೆಗೆ ರೂ 16,50,000/- ಹಣವನ್ನು ವರ್ಗಾಯಿಸಿದ್ದಾರೆ.
ಸ್ವಲ್ಪ ಹೊತ್ತಿನ ಬಳಿಕ ಸದ್ರಿ ಅದೇ ವ್ಯಕ್ತಿಯು ಡಾ.ಚಿದಂಬರ ಅಡಿಗ ಅವರಿಗೆ ಕರೆಮಾಡಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಾಗ, ದೂರುದಾರರಿಗೆ ಅನುಮಾನ ಬಂದು ದೂರವಾಣಿ ಕರೆ ಕಡಿತಗೊಳಿಸಿದ್ದಾರೆ. ಈ ಬಗ್ಗೆ ತನ್ನ ಗೆಳೆಯರೊಂದಿಗೆ ತಿಳಿಸಿದಾಗ ಸದರಿ ಆನ್ ಲೈನ್ ಮೋಸದ ಕೃತ್ಯದ ಕುರಿತು ತಿಳಿದುಬಂದಿರುತ್ತದೆ. ಈ ಬಗ್ಗೆ ದೂರುದಾರರು ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.