ಕಾಸರಗೋಡು, ಮಾ 30(DaijiworldNews/AA): ನಗರ ಹೊರವಲಯದ ಹಳೆ ಸೂರ್ಲುವಿನಲ್ಲಿನ ಮದ್ರಸ ಅಧ್ಯಾಪಕರಾಗಿದ್ದ ಮಡಿಕೇರಿ ಮೂಲದ ಮುಹಮ್ಮದ್ ರಿಯಾಜ್ ಮೌಲವಿ (27) ಅವರ ಹತ್ಯೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಖಲಾಸೆಗೊಳಿಸಿ ಜಿಲ್ಲಾ ಪ್ರಿನ್ಸಿಪಲ್ ಸೆಷನ್ಸ್ ನ್ಯಾಯಾಲಯ ಶನಿವಾರ ತೀರ್ಪು ನೀಡಿದೆ.
ಪ್ರಥಮ ಆರೋಪಿ ಕೇಳುಗುಡ್ಡೆ ಅಯ್ಯಪ್ಪ ನಗರದ ಎಸ್. ಅಜೇಶ್ (27), 2ನೇ ಆರೋಪಿ ಕೇಳುಗುಡ್ಡೆಯ ನಿತಿನ್ ಕುಮಾರ್ (26) ಮತ್ತು 3ನೇ ಆರೋಪಿ ಕೇಳುಗುಡ್ಡೆ ಗಂಗೈ ನಗರದ ಅಖಿಲೇಶ್ (32)ನನ್ನು ಖುಲಾಸೆ ಗೊಳಿಸಿ ನ್ಯಾಯಾಲಯ ತೀರ್ಫು ನೀಡಿದೆ.
2017 ರ ಮಾರ್ಚ್ 20ರ ತಡರಾತ್ರಿ ಮುಹಮ್ಮದ್ ರಿಯಾಜ್ ಮೌಲವಿ ಅವರು ವಾಸಿಸುತ್ತಿದ್ದ ಸ್ಥಳಕ್ಕೆ ನುಗ್ಗಿದ ಹಂತಕರು ಮಾರಕಾಸ್ತ್ರಗಳಿಂದ ಕುತ್ತಿಗೆ ಕೊಯ್ದು ಹತ್ಯೆ ಮಾಡಿದ್ದರು. ಕೃತ್ಯ ನಡೆದು ಮೂರೇ ದಿನಗಳಲ್ಲಿ ಆರೋಪಿಗಳನ್ನು ತನಿಖಾ ತಂಡ ಬಂಧಿಸಿತ್ತು. ಕಣ್ಣೂರು ಕ್ರೈಂ ಬ್ರಾಂಚ್ ಎಸ್ ಪಿ ಆಗಿದ್ದ ಡಾ.ಎ. ಶ್ರೀನಿವಾಸ್ ನೇತೃತ್ವದ ತಂಡವು ತನಿಖೆ ನಡೆಸಿ 2017ರ ಜೂನ್ ನಲ್ಲಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿತ್ತು. ಈ ಆರೋಪ ಪಟ್ಟಿಯಲ್ಲಿ ಕೊಲೆ, ಮತೀಯ ಗಲಭೆ, ಅತಿಕ್ರಮಣ, ಕೃತ್ಯ ನಡೆಸಲು ಗುಂಪು ಸೇರಿರುವುದು, ಆರೋಪ ಮುಚ್ಚಿ ಹಾಕಲು ಹೀಗೆ ಹಲವು ಮೊಕದ್ದಮೆಗಳನ್ನು ಉಲ್ಲೇಖಿಸಿತ್ತು.
ಪ್ರತ್ಯಕ್ಷದರ್ಶಿಗಳು ಸೇರಿದಂತೆ 100 ಸಾಕ್ಷಿಗಳು ವಿಸ್ತರಿಸಲಾಗಿತ್ತು. 50 ರಷ್ಟು ವಸ್ತುಗಳು, 45 ದಾಖಲೆಗಳನ್ನು ಆರೋಪ ಪಟ್ಟಿಯಲ್ಲಿ ಸಲ್ಲಿಸಲಾಗಿತ್ತು. ವೈಜ್ಞಾನಿಕ ಸಾಕ್ಷ್ಯಗಳು, ಡಿಎನ್ ಎ ತಪಾಸಣಾ ಫಲಿತಾಂಶಗಳನ್ನು ಸಲ್ಲಿಸಲಾಗಿತ್ತು.
ಹಲವು ಬಾರಿ ವಿವಿಧ ಕಾರಣಗಳಿಂದ ಮುಂದೂಡಲ್ಪಟ್ಟಿದ್ದ ಪ್ರಕರಣದ ತೀರ್ಪನ್ನು ಆಲಿಸಲು ರಿಯಾಜ್ ಮೌಲವಿರವರ ಕುಟುಂಬಸ್ಥರು ನ್ಯಾಯಾಲಯಕ್ಕೆ ತಲುಪಿದ್ದರು. ಆದರೆ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ ಎಂದು ಜಿಲ್ಲಾ ಪ್ರಿನ್ಸಿಪಲ್ ನ್ಯಾಲಯಲಯದ ನ್ಯಾಯಾಧೀಶ ಕೆ ಬಾಲಕೃಷ್ಣನ್ ತೀರ್ಪು ನೀಡಿದರು.