ಉಡುಪಿ, ಮಾ 30(DaijiworldNews/AA): ಯೇಸು ಕ್ರಿಸ್ತರು ಶಿಲುಬೆಗೇರಿ ಪುನರುತ್ಥಾನರಾದ ಈಸ್ಟರ್ ಜಾಗರಣೆ ಶನಿವಾರ ರಾತ್ರಿ ಜಿಲ್ಲೆಯಾದ್ಯಂತ ಶ್ರದ್ಧಾ ಭಕ್ತಿಯಿಂದ ಜರುಗಿತು.
ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ನೇತೃತ್ವದಲ್ಲಿ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ನಲ್ಲಿ ಸಂಭ್ರಮದಿಂದ ನಡೆಯಿತು. ಈ ವೇಳೆ ಕ್ಯಾಥೆಡ್ರಲ್ ನ ಪ್ರಧಾನ ಧರ್ಮಗುರು ವಲೇರಿಯನ್ ಮೆಂಡೊನ್ಸಾ, ಸಹಾಯಕ ಧರ್ಮಗುರು ವಂ|ಜೋಯ್ ಅಂದ್ರಾದೆ, ಪಿಲಾರ್ ಸಭೆಯ ವಂ|ಅರ್ವಿನ್ ಡಿಕುನ್ನಾ, ವಂ|ನಿತೇಶ್ ಡಿಸೋಜಾ, ಹೊಲಿಕ್ರೋಸ್ ಹೋಮ್ ಕಟಪಾಡಿ ಇದರ ವಂ|ರೋನ್ಸನ್ ಡಿಸೋಜಾ, ನಿವೃತ್ತ ಧರ್ಮಗುರುಗಳಾದ ವಂ|ಲೊರೇನ್ಸ್ ಮಾರ್ಟಿಸ್ ಮತ್ತು ವಂ|ಲೋರೆನ್ಸ್ ರೊಡ್ರಿಗಸ್ ಉಪಸ್ಥೀತರಿದ್ದರು.
ಜಿಲ್ಲೆಯ ಎಲ್ಲಾ ಚರ್ಚ್ ಗಳಲ್ಲಿ ಪಾಸ್ಕ ಜಾಗರಣೆಯ ಧಾರ್ಮಿಕ ವಿಧಿವಿಧಾನಗಳು ಧರ್ಮಗುರುಗಳು ಹೊಸ ಬೆಂಕಿಯನ್ನು ಆಶೀರ್ವದಿಸುವುದರ ಮೂಲಕ ಆರಂಭಗೊಂಡವು. ಆಶೀರ್ವದಿಸಿದ ಹೊಸ ಬೆಂಕಿಯಿಂದ ಬೃಹತ್ ಗಾತ್ರದ ಈಸ್ಟರ್ ಕ್ಯಾಂಡಲ್ ಹಚ್ಚಿ ಮೆರವಣಿಗೆಯಲ್ಲಿ ಸಾಗಿ ಬಂದು ಚರ್ಚ್ ನ ಪ್ರಧಾನ ಸ್ಥಳದಲ್ಲಿ ಪ್ರತಿಷ್ಠಾಪಿಸಿದ ಬಳಿಕ ಹಳೆ ಹಾಗೂ ಹೊಸ ಒಡಂಬಡಿಕೆಯ ಆಯ್ದ ಭಾಗಗಳ ವಾಚನ ಮಾಡಲಾಯಿತು.
ಧರ್ಮಾಧ್ಯಕ್ಷರು ಮತ್ತು ಎಲ್ಲಾ ಚರ್ಚ್ ಗಳ ಧರ್ಮಗುರುಗಳ ಹೊಸ ನೀರಿನ ಆಶೀರ್ವಚನ ನೆರವೇರಿಸಿ ನೆರೆದ ಭಕ್ತಾದಿಗಳ ಮೇಲೆ ಹೊಸ ನೀರನ್ನು ಪ್ರೋಕ್ಷಿಸಿ ಆಶೀರ್ವದಿಸಿದರು. ಬಳಿಕ ನಡೆದ ಬಲಿಪೂಜೆಯಲ್ಲಿ ಯೇಸುವಿನ ಕಷ್ಟಗಳು, ಪುನರುತ್ಥಾನದ ಸಂದೇಶವನ್ನು ವಿವರಿಸಿದ ಧರ್ಮಗುರುಗಳು, ಕ್ರೈಸ್ತ ವಿಶ್ವಾಸ, ಸತ್ಯದ ಮರು ದೃಢೀಕರಣ ನಡೆಸಿದರು. ಬಲಿಪೂಜೆಯ ಬಳಿಕ ಭಾಗವಹಿಸಿದ ಕ್ರೈಸ್ತ ಬಾಂಧವರು ಈಸ್ಟರ್ ಹಬ್ಬದ ಶುಭಾಶಯ ಮಾಡಿ ಸಂಭ್ರಮಿಸಿದರು.