ಉಡುಪಿ, ಮಾ 30(DaijiworldNews/AA): ಅಯೋಧ್ಯೆಯಲ್ಲಿ ಚುನಾವಣೆಯ ರಾಮ ಇದ್ದಾನೆ ಹೊರತು ಅಯೋಧ್ಯ ರಾಮ ಅಲ್ಲ. ಚುನಾವಣೆಗೊಸ್ಕರ ರಾಮಮಂದಿರ ಉದ್ಘಾಟನೆ ಮಾಡಿದ್ದೀರಿ ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಾ.ಮಂಜುನಾಥ್ ಭಂಡಾರಿ ಕಿಡಿಕಾರಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ಗರ್ಭಗುಡಿಗೆ ಹೋಗಿ ಪೂಜೆ ಮಾಡಿದ್ದಾರೆ. ಇದರಿಂದ ದೇವಾಲಯದ ಪರಿಶುದ್ಧತೆ ಹೋಗಲ್ವಾ? ನಾವು ಇಷ್ಟು ದೇವಾಲಯಗಳಿಗೆ ಹೋಗ್ತಿವಿ, ಆದರೆ ನಾವ್ಯಾರು ಗರ್ಭಗುಡಿಗೆ ಹೋಗಿ ಪೂಜೆ ಮಾಡಿಲ್ಲ. ದೇಶಕ್ಕೆ ಆಗಬೇಕಾದ ಅನೇಕ ಕಾರ್ಯಕ್ರಮಗಳಿವೆ. ರಾಮಮಂದಿರದ ವಿಚಾರ ರಾಜಕೀಯಕ್ಕೆ ಬಳಸಬೇಡಿ ಎಂದರು.
ಗ್ಯಾರೆಂಟಿ ಕಸದಬುಟ್ಡಿಗೆ ಹಾಕಿ ಅಂದವರೇ ತಮ್ಮ ಸ್ಕೀಂ ಗಳಿಗೆ ಗ್ಯಾರೆಂಟಿ ಹೆಸರಿಟ್ಟಿದ್ದಾರೆ. ಅಭಿವೃದ್ಧಿಗೆ ಮತವೇ ಹೊರತು ಉದ್ರೇಕ ಹೇಳಿಕೆಗಳಿಗಲ್ಲ. ಬಿಜೆಪಿಯವರು ಗ್ಯಾರೆಂಟಿಗೆ ವಾರೆಂಟಿ ಇಲ್ಲ ಅಂದ್ರು. ಆದರೆ ಜನರು ಬಹುಮತದ ಸರ್ಕಾರ ಕೊಟ್ಟಿದ್ದಾರೆ. ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಶೇ.99 ಜನರಿಗೆ ಗ್ಯಾರೆಂಟಿಗಳು ತಲುಪಿವೆ. ಇದು ನಮ್ಮ ಆತ್ಮವಿಶ್ವಾಸ ಹೆಚ್ವಿಸಿದೆ. ಶೇ.15 ರಷ್ಟು ಮೂಲಧನವನ್ನು 1.20 ಕೋಟಿ ಕುಟುಂಬಗಳಿಗೆ ವಾಪಾಸ್ ಕೊಟ್ಟಿದ್ದೇವೆ. ಸಾರ್ವತ್ರಿಕ ಮೂಲ ಆದಾಯ ಕೊಟ್ಟಿದ್ದೇವೆ. ಕೊಟ್ಟ ಭರವಸೆ ಈಡೇರಿಸಿ ಲೋಕಸಭಾ ಚುನಾವಣೆಗೆ ಹೋಗ್ತಿದ್ದೇವೆ. ಹಾಗಾಗಿ 20 ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಭರವಸೆ ನಮಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಷ್ಟ್ರಪ್ರೇಮ- ರಾಷ್ಟ್ರದ್ರೋಹಿ ನಡುವಿನ ಚುನಾವಣೆ ಅಂತಾರೆ. ನಾವೇನು ಮಂದಿರ ವಿರೋಧಿಗಳಲ್ಲ. ಕೈ ಕೆಸರಾದರೆ ಬಾಯಿ ಮೊಸರು ನಮ್ಮ ಸಿದ್ದಾಂತ. ನಮ್ಮ ಪಕ್ಷದ ಅಕೌಂಟುಗಳನ್ನು ಸೀಜ್ ಮಾಡುತ್ತಿದ್ದಾರೆ. ನಿಮಗೆ ಯಾಕೆ ಬೇಕು ಈ ಸಣ್ಣತನ. ಸುಧೀರ್ಘ ಆಡಳಿತ ಮಾಡಿ ನಮ್ಮಲ್ಲಿ 500 ಕೋಟಿ ಹಣ ಇರಬಹುದು. ಹತ್ತು ವರ್ಷ ಆಡಳಿತ ಮಾಡಿ 6,000 ಕೋಟಿ ಹಣ ನಿಮ್ಮಲ್ಲಿದೆ ಎಂದು ವಾಗ್ದಾಳಿ ನಡೆಸಿದರು.
ಇಷ್ಟು ಹಣ ಇವರಿಗೆ ಎಲ್ಲಿಂದ ಬಂತು. ಇವರ ಅಕೌಂಟು ಯಾಕೆ ಸೀಜ್ ಆಗಿಲ್ಲ. ಸೋಲಿನ ಭಯದಲ್ಲಿ ಈ ರೀತಿ ಮಾಡಿದ್ದಾರೆ. ಭ್ರಷ್ಟಾಚಾರಿಗಳನ್ನು ಸ್ವಚ್ಛಗೊಳಿಸಿ ಕ್ಲೀನ್ ಚಿಟ್ ಕೊಡುವ ವಾಷಿಂಗ್ ಮಷೀನ್ ಬಿಜೆಪಿ. ವಿರೋಧ ಪಕ್ಷದ ನಾಯಕರನ್ನು ಹುಡುಕಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಇಡಿ ಸಿಬಿಐ ಬಳಸಿಕೊಂಡು ಈ ರೀತಿ ಮಾಡುತ್ತಿದ್ದಾರೆ. ಎಲೆಕ್ಷನ್ ಬಾಂಡ್ ಅತಿ ದೊಡ್ಡ ಹಗರಣ ಎಂದು ನಿರ್ಮಲಾ ಸೀತಾರಾಮನ್ ಪತಿ ಲೇಖನ ಬರೆದಿದ್ದಾರೆ ಎಂದು ಅವರು ಹೇಳಿದರು.
ನಮ್ಮದೇ ಯೋಜನೆಗಳ ಹೆಸರು ಬದಲಾಯಿಸಿ ಬಿಜೆಪಿಯವರು ಜಾರಿಗೆ ತಂದಿದ್ದಾರೆ. ಭಾವನಾತ್ಮಕ ಹೇಳಿಕೆ ಕೊಡುತ್ತಾರೆ ಹೊರತು ಅಭಿವೃದ್ದಿ ಬಗ್ಗೆ ಮಾತನಾಡಲ್ಲ. ಹಿಂದುತ್ವ ಅಂದರೆ ಏನು. ನನಗೆ ನಮ್ಮ ತಂದೆ ತಾಯಿ ಹೇಳಿಕೊಟ್ಟ ಹಿಂದುತ್ವ ಗೊತ್ತಿದೆ. ಬುದ್ದ ಬಸವ ಅಂಬೇಡ್ಕರ್ ಹೇಳಿಕೊಟ್ಟ ಹಿಂದುತ್ವ ನಾವು ಪಾಲಿಸುತ್ತೇವೆ. ಭಾವನಾತ್ಮಕ ಹಿಂದುತ್ವಕ್ಕೆ ನಾವು ಹೋಗಲ್ಲ ಒಪ್ಪಿಕೊಳ್ಳಲ್ಲ. ಕೋಮು ಪ್ರಚೋದನೆ ಕೊಡುವ ಹಿಂದುತ್ವ ನಮಗೆ ಬೇಡ. ಪ್ರೀತಿ ಮಾಡುವ ಅಪ್ಪಿಕೊಳ್ಳುವ ಹಿಂದುತ್ವ. ಗಾಂಧೀಜಿ ಹೇಳಿದ ಹಿಂದುತ್ವವನ್ನು ಒಪ್ಪಿಕೊಂಡಿದ್ದೇವೆ, ಅಪ್ಪಿಕೊಂಡಿದ್ದೇವೆ. ಇವರ ಹಿಂದುತ್ವಕ್ಕೆ ಜನ ಒಪ್ಪಿಕೊಂಡಿದ್ದರೆ ಸಿಟಿ ರವಿ ಯಾಕೆ ಸೋಲಬೇಕಿತ್ತು. ಸುನಿಲ್ ಕುಮಾರ್ ಯಾಕೆ ಕಡಿಮೆ ಅಂತರದಲ್ಲಿ ಗೆಲ್ಲಬೇಕಿತ್ತು. ಜೀವರಾಜ್ ಯಾಕೆ ಸೋಲ ಬೇಕಿತ್ತು? ಎಂದು ಅವರು ಪ್ರಶ್ನಿಸಿದ್ದಾರೆ.