ಬಂಟ್ವಾಳ, ಮಾ 30(DaijiworldNews/AA): ನೇತ್ರಾವತಿ ನದಿ ಬದಿಯಲ್ಲಿ ಕೃಷಿ ಉಪಯೋಗಕ್ಕೆ ಕೃಷಿಕರು ಅಳವಡಿಸಿಲಾಗಿದ್ದ ಪಂಪ್ ಸೆಟ್ ಗಳ ವಿದ್ಯುತ್ ಸಂಪರ್ಕ ಕಡಿತ ಮಾಡಲು ಬಂದಿದ್ದ ಮೆಸ್ಕಾಂ ಅಧಿಕಾರಿಗಳ ವಿರುದ್ಧ ಕೃಷಿಕರು ಪ್ರತಿಭಟನೆ ಮಾಡಿದ ಘಟನೆ ಬಂಟ್ವಾಳ ಸರಪಾಡಿ ಗ್ರಾಮದ ಪೆರ್ಲ ಬೀಯಪಾದೆ ಎಂಬಲ್ಲಿ ನಡೆದಿದೆ.
ನೇತ್ರಾವತಿ ನದಿಯಲ್ಲಿ ನೀರು ಕಡಿಮೆಯಾದ ಹಿನ್ನೆಲೆಯಲ್ಲಿ ಮಂಗಳೂರು ಮಹಾಜನತೆಗೆ ಕುಡಿಯುವ ನೀರಿನ ಕೊರತೆ ಉಂಟಾಗಿದೆ ಎಂಬ ಕಾರಣಕ್ಕಾಗಿ ಜಿಲ್ಲಾಧಿಕಾರಿ ಅವರ ಸೂಚನೆಯಂತೆ ಮೆಸ್ಕಾಂ ಅಧಿಕಾರಿಗಳು ಕೃಷಿಕರಿಗೆ ಯಾವುದೇ ಸೂಚನೆ ನೀಡದೆ, ಏಕಾಏಕಿ ಕೃಷಿ ಪಂಪ್ ಸೆಟ್ ಗಳ ಸಂಪರ್ಕ ಕಡಿತಕ್ಕೆ ಮುಂದಾಗಿದ್ದರು. ಈ ವೇಳೆ ಹಠಾತ್ ಸ್ಥಳಕ್ಕೆ ಜಮಾಯಿಸಿದ ಕೃಷಿಕರು ಅಧಿಕಾರಿಗಳನ್ನ ಪ್ರಶ್ನಿಸಿದ್ದು, ಅವರ ವಿರುದ್ಧ ಪ್ರತಿಭಟನೆ ನಡೆಸಿ ಸ್ಥಳದಿಂದ ತೆರಳುವಂತೆ ಮಾಡಿದ್ದಾರೆ.
ಎ.ಎಂ.ಆರ್.ಡ್ಯಾಂ ನ ಬಳಿಯಲ್ಲಿರುವ ಕೃಷಿಕರ ಪಂಪ್ ಸೆಟ್ ಗಳ ಮೇಲೆ ಕಣ್ಣು ಹಾಕಿರುವ ಅಧಿಕಾರಿಗಳ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ, ಅವರು ಬಿಳಿಯೂರು ಬ್ರಿಡ್ಜ್ ನಲ್ಲಿ ಸಾಕಷ್ಟು ನೀರು ಇದ್ದು,ಅದರ ಬಳಕೆಯನ್ನು ಅಧಿಕಾರಿಗಳು ಮಾಡಲಿ, ಜೊತೆಗೆ ಉಪ್ಪಿನಂಗಡಿಯಲ್ಲಿ ಬೋಟಿಂಗ್ ಸಹಿತ ಅನೇಕ ವಿಚಾರಗಳಿಗೆ ನದಿಯ ನೀರನ್ನು ಬಳಕೆ ಮಾಡುತ್ತಿದ್ದು ಅಲ್ಲಿಂದ ನೀರನ್ನು ಮಂಗಳೂರಿಗೆ ಪಡೆಯಲಿ ಎಂದು ತಿಳಿಸಿದ್ದಾರೆ.
ಮಂಗಳೂರು ನಗರಕ್ಕೆ ನೀರು ಸರಬರಾಜು ಮಾಡುವ ಉದ್ದೇಶದಿಂದ 7 ಮೀಟರ್ ಎತ್ತರದ ಡ್ಯಾಮ್ ನಿರ್ಮಾಣ ಮಾಡಿದ್ದು ಯಾಕೆ? ಅಲ್ಲಿನ ಕೃಷಿಕರಿಗೆ ಸೂಕ್ತವಾದ ಪರಿಹಾರ ನೀಡಿ ಅಣೆಕಟ್ಟಿನ ಉಪಯೋಗ ಪಡೆದುಕೊಳ್ಳುವುದು ಬಿಟ್ಟು ಬಡ ರೈತರ ಜೀವನದ ಮೇಲೆ ಯಾಕೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಕೃಷಿಕರು ಆರೋಪ ಮಾಡಿದ್ದಾರೆ. ಕೃಷಿಯನ್ನೇ ನಂಬಿ ಬದುಕುವ ನಾವು ಏನು ಮಾಡಬೇಕು ಎಂದು ಪ್ರಶ್ನಿಸಿದ್ದು, ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.