ಪುತ್ತೂರು: ಸೈಬರ್ ವಂಚನೆ: ಖ್ಯಾತ ಡಾಕ್ಟರನ್ನೇ ಯಾಮಾರಿಸಿದ ಖದೀಮರು
Sat, Mar 30 2024 08:21:56 AM
ಪುತ್ತೂರು, ಮಾ 30 (DaijiworldNews/MS): ಇಲ್ಲಿನ 69 ವರ್ಷದ ಖ್ಯಾತ ವೈದ್ಯರೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದಿದ್ದು, ಬರೋಬ್ಬರಿ 16 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡಿದ್ದಾರೆ. ಪುತ್ತೂರಿನ ಬೊಳ್ವಾರು ನಿವಾಸಿ ಡಾ.ಚಿದಂಬರ ಅಡಿಗ ವಂಚನೆಗೊಳದವರು.ಅವರು ನೀಡಿದ ದೂರಿನಂತೆ ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಾ ಅಡಿಗ ರವರಿಗೆ ದೂರವಾಣಿ ಮೂಲಕ ಮಾ.28 ರಂದು ಬೆಳಿಗ್ಗೆ, ಅಪರಿಚಿತ ವ್ಯಕ್ತಿಯಿಂದ ಫೋನ್ ಕರೆ ಬಂದಿದ್ದು, ಕರೆ ಸ್ವೀಕರಿಸಿ ಮಾತನಾಡಿದಾಗ, ಕರೆ ಮಾಡಿದ ವ್ಯಕ್ತಿಯು ನಾನು ದೆಹಲಿಯಿಂದ ಪೊಲೀಸ್ ಮಾತನಾಡುತ್ತಿರುವುದಾಗಿ ತಿಳಿಸಿ, ನಿಮ್ಮ ಮೇಲೆ ದೆಹಲಿಯಲ್ಲಿ ಮಾದಕ ವಸ್ತುವಿಗೆ ಸಂಬಂದಿಸಿದಂತೆ ಹಾಗೂ ಅಕ್ರಮ ಹಣ ಹೊಂದಿರುವ ಬಗ್ಗೆ ಮತ್ತು ಮಾನವ ಕಳ್ಳ ಸಾಗಾಣಿಕೆ ಪ್ರಕರಣ ದಾಖಲಾಗಿದೆ. ನಿಮ್ಮನ್ನು ಅರೆಸ್ಟ್ ಮಾಡಲು ಕೋರ್ಟ್ ನಿಂದ ವಾರಂಟ್ ಬಂದಿದೆ ಎಂದು ಹೇಳಿ ನೀವು ದೆಹಲಿಯ ಸಿಬಿಐ ಕೋರ್ಟ್ ಗೆ ಹಾಜರಾಗಬೇಕು. ನಿಮಗೆ ಇಲ್ಲಿಗೆ ಬರಲು ಆಗದಿದ್ದರೆ ಈಗ ಆನ್ಲೈನ್ ಮೂಲಕ ಕೋರ್ಟ್ ನ ಕೇಸ್ ನಡೆಸುತ್ತೇವೆ. ನೀವು ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿದ್ದ ಹಣವನ್ನು ನಾನು ಹೇಳುವ ಅಕೌಂಟ್ ನಂಬ್ರಕ್ಕೆ ವರ್ಗಾವಣೆ ಮಾಡಬೇಕು ನಿಮ್ಮ ಕೋರ್ಟ್ ಕೇಸ್ ಮುಗಿದ ಮೇಲೆ ನಿಮಗೆ ನಿಮ್ಮ ಹಣ ವಾಪಾಸು ಸಿಗುತ್ತದೆ ಇಲ್ಲದಿದ್ದರೆ ನಿಮ್ಮ ಮನೆಗೆ ಬಂದು ನಿಮ್ಮನ್ನು ಅರೆಸ್ಟ್ ಮಾಡುತ್ತೇವೆ ಎಂಬುದಾಗಿ ತಿಳಿಸಿದ್ದಾರೆ.
ದೂರುದಾರರ ವಿರುದ್ದ ದೆಹಲಿಯಲ್ಲಿ ಪ್ರಕರಣ ದಾಖಲಾಗಿರುವಂತೆ ಬಿಂಬಿಸುವ ಕೆಲವೊಂದು ದಾಖಲೆಗಳನ್ನು ಅಡಿಗ ರವರ ಮೊಬೈಲ್ ಫೋನ್ ನ ವಾಟ್ಸ್ ಆಪ್ ಗೆ ಕಳುಹಿಸಿರುವುದಾಗಿ ತಿಳಿಸಿದ್ದಾರೆ.
ಅಪರಿಚಿತನ ಮಾತನ್ನು ನಂಬಿ, ಗಾಬರಿಗೊಂಡು,ಅಡಿಗರವರು ಬ್ಯಾಂಕ್ ಖಾತೆಯಿಂದ, RTGS ಮೂಲಕ ಸದರಿ ಅಪರಿಚಿತ ತಿಳಿಸಿದ ಬ್ಯಾಂಕ್ ಖಾತೆಗೆ ರೂ 16,50,000/- ಹಣವನ್ನು ವರ್ಗಾವಣೆ ಮಾಡಿರುತ್ತಾರೆ . ಸ್ವಲ್ಪ ಹೊತ್ತಿನ ಬಳಿಕ ಸದ್ರಿ ಅದೇ ವ್ಯಕ್ತಿಯು ಪಿರ್ಯಾದಿದಾರರಿಗೆ ಕರೆಮಾಡಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಾಗ, ಪಿರ್ಯಾದಿದಾರವರಿಗೆ ಅನುಮಾನ ಬಂದು ದೂರವಾಣಿ ಕರೆ ಕಡಿತಗೊಳಿಸಿದ್ದು, ತನ್ನ ಗೆಳೆಯರೊಂದಿಗೆ ಈ ಬಗ್ಗೆ ತಿಳಿಸಿದಾಗ ಸದರಿ ಆನ್ ಲೈನ್ ಮೋಸದ ಕೃತ್ಯದ ಬಗ್ಗೆ ತಿಳಿದುಬಂದಿರುತ್ತದೆ.
ಈ ಬಗ್ಗೆ ದೂರುದಾರರು ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ, ಅ ಕ್ರ ನಂ :32-2024 ಕಲಂ:406,419, 420 ಐ ಪಿ ಸಿ ಮತ್ತು 66 ( C) ,66 ( D ) I T ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.