ಮಂಗಳೂರು, ಮಾ 29(DaijiworldNews/MS): ಮಂಗಳೂರು ಸೇರಿ ಕರಾವಳಿಯಾದ್ಯಂತ ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನದ ಸ್ಮರಣಾರ್ಥ ಕ್ರೈಸ್ತ ಬಾಂಧವರು ಶುಭ ಶುಕ್ರವಾರವನ್ನು ಭಕ್ತಿ, ಶ್ರದ್ಧೆಯಿಂದ ಆಚರಿಸುತ್ತಿದ್ದಾರೆ.
ಚರ್ಚ್ ಹಾಗೂ ಚರ್ಚ್ ಆವರಣದಲ್ಲಿ ಯೇಸು ಕ್ರಿಸ್ತರಿಗೆ ಶಿಲುಬೆಯ ಮರಣ ಶಿಕ್ಷೆ ವಿಧಿಸಿದಲ್ಲಿಂದ ತೊಡಗಿ ಅವರು ಶಿಲುಬೆಯಲ್ಲಿ ಮರಣಿಸಿ ಅವರ ಶರೀರವನ್ನು ಸಮಾ ಮಾಡುವಲ್ಲಿವರೆಗಿನ 14 ಪ್ರಮುಖ ಘಟನಾವಳಿಗೆ ಸಂಬಂಧಿಸಿದ ‘ಶಿಲುಬೆಯ ಹಾದಿ ’ (ವೇ ಆಫ್ ಕ್ರಾಸ್) ಯಲ್ಲಿ ಬಿಜೈ ,ಮಿಲಾಗ್ರೀಸ್ ಸೇರಿ ನಗರದ ಎಲ್ಲಾ ಚರ್ಚ್ ಗಳಲ್ಲಿ ಆಚರಣೆ ಮಾಡಲಾಗುತ್ತಿದೆ. ಜಿಲ್ಲೆಯ ಬಹುತೇಕ ಚರ್ಚ್ ಗಳಲ್ಲಿ ಏಸು ಕ್ರಿಸ್ತರ ಬಂಧನ, ಶಿಲುಬೆಯ ಮೇಲೆ ಮರಣವನ್ನಪ್ಪುವ ಘಟನೆಗಳನ್ನು ಪ್ರಸ್ತುತ ಪಡಿಸಲಾಯಿತು. ಶಿಲುಬೆಯ ಶಿಲುಬೆಯ ಹಾದಿಯ 14 ಪ್ರಮುಖ ಘಟ್ಟಗಳನ್ನು ನೆನಪಿಸಿ ಧ್ಯಾನಿಸಿ ಪ್ರಾರ್ಥನೆ ನಡೆಯಿತು.
ಇದೇ ಸಂದರ್ಭ ಧ್ಯಾನ, ಶಿಲುಬೆಯ ಆರಾಧನೆ, ಲೋಕ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಶುಭ ಶುಕ್ರವಾರದಂದು ಚರ್ಚ್ಗಳಲ್ಲಿ ಘಂಟೆಗಳ ಶಬ್ದವಿರುವುದಿಲ್ಲ. ಬಲಿ ಪೂಜೆ ಇರುವುದಿಲ್ಲ. ಅತ್ಯಂತ ಭಕ್ತಿಯಿಂದ ನಿಶ್ಯಬ್ದ ಪರಿಸರದಲ್ಲಿ ಕ್ರೈಸ್ತರು ಪ್ರಾರ್ಥನೆ ಸಲ್ಲಿಸುತ್ತಾರೆ. ಧ್ಯಾನ ಹಾಗೂ ಉಪವಾಸದಲ್ಲಿ ದಿನ ಕಳೆಯುತ್ತಾರೆ.