ಮಂಗಳೂರು, ಮಾ 28(DaijiworldNews/AA): ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಂಪೂರ್ಣ ಸೋತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ತಪ್ಪನ್ನು ಮರೆಮಾಚಲು ಕೇಂದ್ರ ಸರಕಾರವನ್ನು ದೂರುವ ದಿನಕ್ಕೊಂದು ನಾಟಕವಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ವಾಗ್ದಾಳಿ ನಡೆಸಿದ್ದಾರೆ.
ದಕ್ಷಿಣ ಜಿಲ್ಲಾ ಬಿಜೆಪಿಯ ಲೋಕಸಭಾ ಚುನಾವಣೆ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮೊದಲು ಕೇಂದ್ರ ಸರಕಾರ ಪಡಿತರ ಅಕ್ಕಿ ಕೊಡುತ್ತಿಲ್ಲ ಎಂದರು. ನಂತರ ನಮ್ಮ ತೆರಿಗೆ ನಮ್ಮ ಹಕ್ಕು ಎಂಬ ನಾಟಕವಾಡಿ ದೆಹಲಿಗೆ ತೆರಳಿ ಪ್ರತಿಭಟನೆ ಮಾಡಿದರು. ಇದೀಗ ಎನ್ ಡಿಆರ್ ಎಫ್ ಗಾಗಿ ಆರ್ಟಿಕಲ್ 32ರ ಅಡಿಯಲ್ಲಿ ಸುಪ್ರೀಂ ಕೋರ್ಟಿಗೆ ತೆರಳುವ ನಾಟಕವಾಡಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಈ ಯತ್ನ ನಡೆಸಿದ್ದಾರೆ. ಈ ವರೆಗೆ ಅವರು ನಿದ್ರೆ ಮಾಡುತ್ತಿದ್ದರೇ? ಎಂದು ಪ್ರಶ್ನಿಸಿದ್ದಾರೆ.
ಈ ರೀತಿಯ ನಾಟಕಗಳ ಮೂಲಕ ಜನರ ಗಮನ ಬೇರೆಡೆಗೆ ಸೆಳೆದು ಚುನಾವಣೆ ಮುಗಿಸಿಕೊಳ್ಳಬೇಕೆಂದು ಸಿದ್ದರಾಮಯ್ಯ ಅವರು ಯೋಚನೆ ಮಾಡಿದ್ದರೆ, ಅದು ಅವರ ಭ್ರಮೆಯಷ್ಟೇ. ರಾಜ್ಯದ ಜನರಿಗೆ ಕುಡಿಯುವ ನೀರು ಕೊಡಲು ಅವರಿಗೆ ಸಾಧ್ಯವಾಗುತ್ತಿಲ್ಲ. ಬರದಿಂದ ತತ್ತರಿಸಿರುವ ಜನತೆಗೆ ಪರಿಹಾರ ನೀಡಲು ಆಗುತ್ತಿಲ್ಲ ಎಂದು ಅವರು ಟೀಕಿಸಿದ್ದಾರೆ.
ಶೇ 40ರಷ್ಟು ಗುರಿ ಸಾಧಿಸಲೂ ವಿಫಲ:
ಕಳೆದ ಬಜೆಟ್ ನಲ್ಲಿ ಘೋಷಣೆ ಮಾಡಿರುವ ಗುರಿಯನ್ನು ಶೇ 40ರಷ್ಟು ಸಾಧಿಸುವುದಕ್ಕೂ ಕಾಂಗ್ರೆಸ್ ಗೆ ಸಾಧ್ಯವಾಗಿಲ್ಲ. ಕೃಷಿಕರಿಗೆ ಶೂನ್ಯ ಬಡ್ಡಿದರದಲ್ಲಿ ನೀಡುತ್ತೇವೆ ಎಂದಿದ್ದ ಸಾಲದ ಪ್ರಮಾಣವನ್ನು 3ರಿಂದ 5 ಲಕ್ಷಕ್ಕೆ ಹೆಚ್ಚಿಸಲು ಸಾಧ್ಯವಾಗಿಲ್ಲ. ಹಾಲು ಉತ್ಪಾದಕರಿಗೆ ನೀಡಬೇಕಿದ್ದ 1,200 ಕೋಟಿ ರೂ. ಹಾಲಿನ ಪ್ರೋತ್ಸಾಹ ಧನವನ್ನು ಇದುವರೆಗೂ ನೀಡಿಲ್ಲ. ಕಾಂಗ್ರೆಸ್ ಬಂದ ಬಳಿಕ ಈ ರಾಜ್ಯ ದಿವಾಳಿಯಾಗಿದೆ ಎಂದು ಪ್ರಧಾನಿಯವರೇ ಹೇಳಿದ್ದರು. ಅದನ್ನು ಇದೀಗ ರಾಜ್ಯ ಸರ್ಕಾರವೇ ಸಾಬೀತುಪಡಿಸಿದೆ ಎಂದು ಪ್ರತಾಪ್ ಸಿಂಹ ನಾಯಕ್ ಹೇಳಿದ್ದಾರೆ.
15 ಬಜೆಟ್ ಗಳನ್ನು ಮಂಡಿಸಿದ್ದೇನೆ ಎಂದು ಹೇಳಿಕೊಳ್ಳುವ ಆರ್ಥಿಕ ತಜ್ಞ ಸಿದ್ದರಾಮಯ್ಯನವರು ಹಣಕಾಸಿನ ನಿರ್ವಹಣೆಯಲ್ಲಿ ಸೋತಿರುವುದು ಎದ್ದು ಕಾಣುತ್ತದೆ. ಇದೇ ಮೊದಲ ಬಾರಿಗೆ ಕರ್ನಾಟಕವು ಜಿಡಿಪಿ ಬೆಳವಣಿಗೆಯಲ್ಲಿ ಭಾರತದ ಸರಾಸರಿಗಿಂತ ಕೆಳಮಟ್ಟಕ್ಕೆ ಕುಸಿದಿದೆ. ಯಾವಾಗಲೂ ದೇಶದ ಜಿಡಿಪಿಗಿಂತ ನಮ್ಮ ಜಿಡಿಪಿ ಹೆಚ್ಚಿರುತ್ತಿತ್ತು. 2021-22ರಲ್ಲಿ ದೇಶದ ಜಿಡಿಪಿ ಶೇ 9.1 ಇದ್ದಾಗ ಕರ್ನಾಟಕದ್ದು ಶೇ 9.8ರಷ್ಟಿತ್ತು. 2022-23ರಲ್ಲಿ ದೇಶದ ಜಿಡಿಪಿ ಶೇ 7.2 ಇದ್ದಾಗ ಕರ್ನಾಟಕದ್ದು ಶೇ 8.1 ಇತ್ತು. 2023-24ರಲ್ಲಿ ಭಾರತದ ಜಿಡಿಪಿ ಶೇ 7.3 ಇದ್ದು ಕರ್ನಾಟಕದ್ದು ಶೇ 6.6ಕ್ಕೆ ಕುಸಿದಿದೆ. ಇದಕ್ಕೆ ಕೇಂದ್ರ ಸರಕಾರದ ಮೇಲೆ ಆರೋಪ ಮಾಡಲು ಸಾಧ್ಯವೇ ಎಂದರು.
ಬೀದಿಗೆ ಬಂದು ಸುಳ್ಳು ಹೇಳುವ ಸಿದ್ದರಾಮಯ್ಯ:
ಸಿದ್ದರಾಮಯ್ಯನವರು ರಾಜ್ಯದ ಮಧ್ಯಂತರ ಆರ್ಥಿಕ ಯೋಜನೆಯ ವರದಿಯಲ್ಲಿ ಸಮರ್ಪಕ ಅಂಕಿ-ಅಂಶ ನೀಡುತ್ತಾರೆ. ಆದರೆ ಬೀದಿಗೆ ಬಂದು ಮಾತನಾಡುವಾಗ ಕೇಂದ್ರದ ವಿರುದ್ಧ ನಾಲಿಗೆ ಹರಿಬಿಡುತ್ತಾರೆ. ಈ ವರದಿಯ ಒಂದು ಕಡೆ 2021-22ಕ್ಕೆ ಹೋಲಿಸಿದರೆ 2022-23ರಲ್ಲಿ ಕೇಂದ್ರ ಸರಕಾರದ ಒಟ್ಟು ತೆರಿಗೆ ಸ್ವೀಕೃತಿಯು ಶೇ 12.6ರಷ್ಟು ಹೆಚ್ಚಳವಾಗಿದೆ ಎಂದಿದ್ದಾರೆ. ಇದನ್ನು ಇದೇ ಫೆಬ್ರವರಿಯಲ್ಲಿ ವಿಧಾನಸಭೆಯಲ್ಲೂ ಮಂಡಿಸಿದ್ದಾರೆ. 2022-23ರಲ್ಲಿ ಕೇಂದ್ರದಿಂದ ಪುರಸ್ಕೃತವಾದ ರಾಜ್ಯದ ಯೋಜನೆಗಳಿಗೆ ಕೇಂದ್ರದಿಂದ 16,579 ಕೋಟಿ ಸಹಾಯಧನ ಸ್ವೀಕೃತವಾಗಿದೆ. ಅಲ್ಲದೆ 6,739 ಕೋಟಿ ರೂ.ಗಳನ್ನು ಇಲಾಖೆಗಳ ಎನ್ಎಸ್ಎ ಖಾತೆಗಳಿಗೆ ನೇರವಾಗಿ ಬಿಡುಗಡೆ ಮಾಡಿದೆ ಎಂದು ಹೇಳಿದರು.
ವಿವಿಧ ಬಂಡವಾಳ ಯೋಜನೆಗಳಿಗೆ ಕೇಂದ್ರವು 3,399 ಕೋಟಿ ರೂ. ಬಡ್ಡಿರಹಿತ ಸಾಲವನ್ನು ಬಿಡುಗಡೆ ಮಾಡಿದೆ. 22-23ರ ಆಯವ್ಯಯದಲ್ಲಿ ಅಂದಾಜಿಸಿದ ಜಿಎಸ್ ಟಿ ಪರಿಹಾರದ ಮೊತ್ತವು 5 ಸಾವಿರ ಕಕೋಟಿಗೆ ಬದಲಾಗಿದೆ ಕೇಂದ್ರ ಸರರಕಾರದಿಂದ 20,288 ಕೋಟಿ ರೂ ಸ್ವೀಕೃತವಾಗಿದ್ದು ರಾಜ್ಯದ ರಾಜಸ್ವ ಸ್ವೀಕೃತಿ ಹೆಚ್ಚಾಗಿದೆ ಎಂದು ಅಧಿಕೃತ ದಾಖಲೆಗಳಲ್ಲಿ ಅವರೇ ಬರೆದುಕೊಂಡಿದ್ದಾರೆ. ಆದರೆ ಹೊರಗೆ ಬಂದು ಕೇಂದ್ರ ಹಣ ನೀಡುತ್ತಿಲ್ಲ ಎಂದು ದೂರುತ್ತಾರೆ. ಈ ಸುಳ್ಳನ್ನು ನಂಬಲು ಸಾಧ್ಯವೇ ಎಂದು ಪ್ರತಾಪ್ ಸಿಂಹ ನಾಯಕ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಚುನಾವಣೆ ನಿರ್ವಹಣಾ ಸಮಿತಿಯ ದೇವದಾಸ್ ಶೆಟ್ಟಿ ಹಾಗೂ ದ.ಕ ಜಿಲ್ಲಾ ಬಿಜೆಪಿ ಮಾಧ್ಯಮ ಸಂಚಾಲಕ ವಸಂತ ಜೆ ಪೂಜಾರಿ ಉಪಸ್ಥಿತರಿದ್ದರು.