ಉಳ್ಳಾಲ, ಮಾ 27(DaijiworldNews/ AK):ಮೋದಿ ಸರಕಾರ 1,13,000 ಕೋಟಿ ರೂ. ಅನುದಾನ ಜಿಲ್ಲೆಯ ಅಭಿವೃದ್ಧಿಗೆ ಕಳೆದ 10 ವರ್ಷಗಳಲ್ಲಿ ನೀಡಿದೆ. 3,000 ಕೋಟಿ ರೂ. ಮಂಗಳೂರು ಕ್ಷೇತ್ರಕ್ಕೆ ಬಂದಿದೆ. ಅಭಿವೃದ್ಧಿಯಲ್ಲಿ ನಳಿನ್ ಕುಮಾರ್ ಹೆಸರು ಹೇಳುವುದು ಬೇಡ , ಮೋದಿ ಹೆಸರು ಹೇಳಿಕೊಂಡು ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿರಿ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಸಂಸದನಾಗುವ ಆರಂಭದಲ್ಲಿ ಪ್ರೇರಣೆ, ಶಕ್ತಿಯನ್ನು ಮಂಗಳೂರು ಕ್ಷೇತ್ರದ ಜನ ತುಂಬಿದ್ದರು., ವಿಚಾರದಲ್ಲಿ ಎದುರಾಳಿಗಳಿರಬಹುದು ಆದರೆ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿಯವರ ಆಶೀರ್ವಾದ ಪಡೆದುಕೊಂಡು ಮುಂದುವರಿದಿರುವ ಚರಿತ್ರೆಯಿದೆ.
ಜಿಲ್ಲೆಯಲ್ಲಿ ಮಂಗಳೂರು ಕ್ಷೇತ್ರದಲ್ಲಿ ಮೊದಲು ಕಚೇರಿ ತೆರೆಯುವ ಮೂಲಕ ಅಭ್ಯರ್ಥಿ ಬೃಜೇಶ್ ಚೌಟರಿಗೆ ಧೈರ್ಯ ಮತ್ತು ವಿಶ್ವಾಸ ತಂದುಕೊಡುವ ಪ್ರಯತ್ನವಾಗಿದೆ. ಕಚೇರಿ ಆರಂಭದ ಮೂಲಕ ಅತಿಹೆಚ್ಚು ಮತವನ್ನು ತಂದುಕೊಡುವ ಸಂಕಲ್ಪ ಪಡೆದುಕೊಳ್ಳುವ ದಿನ. ಮೋದಿ ಆಡಳಿತದ ಅವಧಿಯಲ್ಲಿ ಶುದ್ದೀಕರಣವಾದ ರಾಜಕಾರಣವಿದೆ ಅನ್ನುವ ಉದ್ದೇಶದಿಂದ ಸಂತರು ಸಹ ದೇಶದ ರಾಜಕಾರಣದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಅನಿವಾಸಿ ಭಾರತೀಯರು ಮೋದಿಯವರೇ ಪ್ರಧಾನಿಯಾಗಬೇಕು ಅನ್ನುವ ಆಶಯವನ್ನು ವ್ಯಕ್ತಪಡಿಸುತ್ತಾರೆ ಎಂದರು.
ಭಾರತದಲ್ಲಿನ ಮೋದಿ ಆಡಳಿತದ ಕಾರಣದಿಂದ ಜಗತ್ತಿನಲ್ಲೇ ಪರಿವರ್ತನೆಗಳಾಗುತ್ತಿವೆ. ಕಾಂಗ್ರೆಸ್ಸಿನವರು ಆಗುತ್ತಿದ್ದಲ್ಲಿ 10 ಪಟ್ಟು ಪ್ರಚಾರ ಪಡೆದುಕೊಳ್ಳುತ್ತಿದ್ದರು. ಕ್ಷೇತ್ರದಲ್ಲಿ ಖಾದರ್ ಫೊಟೊ ಹಾಕಿರಬಹುದು ಅದರ ಹಿಂದಿರುವುದು ಕೇಂದ್ರ ಸರಕಾರದ ಹಣವಾಗಿದೆ. ಹೋರಾಟಗಳಿಗೆ ಮೋದಿ ಸರಕಾರದ ಮೂಲಕ ಉತ್ತರ ಸಿಕ್ಕಿದೆ. ಜಿಲ್ಲೆಗೆ ಸಮರ್ಥ ಅಭ್ಯರ್ಥಿಯನ್ನು ಬಿಜೆಪಿ ನೀಡಿದ್ದು, 3 ಲಕ್ಷ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ ಎಂದರು.
ಒಂದೇ ಮನಸ್ಸು, ಒಂದು ದೇಶ , ಒಂದು ಕಲ್ಪನೆಯ ಜೊತೆಗೆ ಮತಚಲಾಯಿಸಿರಿ ಎಲ್ಲೆಡೆಯೂ ಮೋದಿ ಗಾಳಿ ಬೀಸುತ್ತಿದೆ, ಅಯೋಧ್ಯೆ ನಿರ್ಮಾಣದ ನಂತರ ಶೇ.10 ಮತಗಳು ಜಾಸ್ತಿಯಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ತೊಕ್ಕೊಟ್ಟುವಿನಲ್ಲಿ ಮಂಗಳೂರು ಮಂಡಲ ಬಿಜೆಪಿ ಕಚೇರಿಗೆ ಶಾಶ್ವತ ಕಟ್ಟಡ ರಚಿಸುವ ಯೋಚನೆಯಿದೆ. ಪಾಣೆಮಂಗಳೂರು ಸೇತುವೆಗೆ 13 ವರ್ಷಗಳು ಪಡೆದುಕೊಂಡ ಕಾಂಗ್ರೆಸ್ ಸರಕಾರ, ಜನರ ಕೆಲಸಕಾರ್ಯಗಳಿಗೆ ವೇಗ ಹೆಚ್ಚಿಸಿದ ಫ್ಲೈಓವರ್ ಗಳ ನಿರ್ಮಾಣದ ಕುರಿತು ಟೀಕಿಸುವುದು ಸರಿಯಲ್ಲ.ನಳಿನ್ ಕುಮಾರ್ ಶಿಲನ್ಯಾಸ ಮಾಡಿಲ್ಲ, ಉದ್ಘಾಟನೆ ಮಾಡಿಲ್ಲ ಆದ್ದರಿಂದ ಪ್ರಚಾರದಲ್ಲಿಲ್ಲ. ಮಂಗಳೂರು ಕ್ಷೇತ್ರಕ್ಕೆ ಅತಿಹೆಚ್ಚು ಅನುದಾನ ನೀಡಲಾಗಿದೆ. ರಾ.ಹೆ ಅಭಿವೃದ್ಧಿ ಗೆ ವೇಗ ದೊರೆತಿದೆ. ಅಭ್ಯರ್ಥಿ ಸ್ಥಾನ ಕೈತಪ್ಪಿದರೂ , ಮುಂದಿನ ಅಭ್ಯರ್ಥಿಗೆ ಭರವಸೆಯನ್ನು ಕೊಟ್ಟಿರುವ ಏಕೈಕ ಸಂಸದ ನಳಿನ್ ಕಟೀಲ್ ಎಂದರು.
ಈ ಸಂದರ್ಭ ಮಂಗಳೂರು ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್, ಕ್ಷೇತ್ರ ಉಸ್ತುವಾರಿ ರಾಧಾಕೃಷ್ಣ ರೈ , ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರು, ಮಂಗಳೂರು ಮಂಡಲ ಮಾಜಿ ಅಧ್ಯಕ್ಷಚಂದ್ರಹಾಸ್ ಪಂಡಿತ್ ಹೌಸ್, ಜಿಲ್ಲಾ ವಕ್ತಾರ ಮೋಹನರಾಜ್ ಕೆ.ಆರ್, ರಾಜ್ಯ ಮೀನುಗಾರ ಪ್ರಕೋಷ್ಠದ ಸಹಸಂಚಾಲಕ ಯಶವಂತ್ ಅಮೀನ್ ಸುಜಿತ್ ಮಾಡೂರು, ಉಪಸ್ಥಿತರಿದ್ದರು.