ಕಾಸರಗೋಡು , ಮಾ 27(DaijiworldNews/ AK): ಎ ಟಿ ಎಂ ಗೆ ಹಣ ತುಂಬಿಸಲು ಬಂದಿದ್ದ ವಾಹನದಿಂದ ೫೦ ಲಕ್ಷ ರೂ . ದರೋಡೆಗೈದ ಘಟನೆ ಇಂದು ಮಧ್ಯಾಹ್ನ ಉಪ್ಪಳ ಪೇಟೆಯಲ್ಲಿ ನಡೆದಿದೆ.
ವಾಹನದ ಗಾಜನ್ನು ಒಡೆದು ಹಣ ದರೋಡೆ ಮಾಡಿದ್ದಾರೆ. ಉಪ್ಪಳ ಪೇಟೆಯಲ್ಲಿರುವ ಆಕ್ಸಿಸ್ ಬ್ಯಾಂಕ್ ನ ಎ ಟಿ ಎಂ ಮೆಷಿನ್ಗೆ ಹಣ ತುಂಬಿಸಲು ಬಂದಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.
ವಾಹನದಲ್ಲಿದ್ದ ನೌಕರರು ವಾಹನ ನಿಲ್ಲಿಸಿ ಎ ಟಿ ಎಂ ಮೆಷಿನ್ ತೆರೆದು ವಾಹನದಲ್ಲಿದ್ದ ಹಣದ ಬಾಕ್ಸನ್ನು ತೆಗೆದುಕೊಂಡು ಹೋಗಲು ಮರಳಿ ಬಂದಾಗ ವಾಹನದ ಗಾಜು ಹುಡಿಯಾದ ಸ್ಥಿತಿಯಲ್ಲಿ ಕಂಡುಬಂದಿದೆ . ಪರಿಶೀಲಿಸಿದಾಗ ಸುಮಾರು 50 ಲಕ್ಷ ರೂ . ಗಳಿದ್ದ ಬಾಕ್ಸ್ ನಾಪತ್ತೆಯಾಗಿತ್ತು .ಖಾಸಗಿ ಏಜೆನ್ಸಿಯ ವಾಹನದಲ್ಲಿ ಹಣವನ್ನು ತಂದು ಎ ಟಿಎಂ ಗೆ ತುಂಬಿಸಲಾಗುತಿತ್ತು.ವಾಹನದ ಹಿಂಬದಿಯ ಲಾಕರ್ ನಲ್ಲಿ ಇಡಲಾಗಿದ್ದ ಹಣವನ್ನು ಉಪ್ಪಳದ ಎ ಟಿ ಎಂ ನಲ್ಲಿ ತುಂಬಿಸಲು ಮಧ್ಯಭಾಗದ ಸೀಟಿನಲ್ಲಿ ಇತ್ತು. ಗಾಜು ಲಾಕ್ ಹಾಕಿ ಎ ಟಿ ಎಂ ಕೌಂಟರ್ ಗೆ ನೌಕರರು ತೆರಳಿದ್ದರು .
ಈ ಸಂದರ್ಭದಲ್ಲಿ ಗಾಜನ್ನು ಒಡೆದು ಕೃತ್ಯ ನಡೆಸಲಾಗಿದೆ, ಮಂಜೇಶ್ವರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದು , ವಾಹನದ ಚಾಲಕ ಮತ್ತು ನೌಕರ ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸಮೀಪದ ಸಿ ಸಿ ಟಿವಿ ಕ್ಯಾಮರಾ ಮೂಲಕ ಮಾಹಿತಿ ಕಲೆ ಹಾಕಲಾಗುತ್ತಿದೆ .