ಉಡುಪಿ ,ಮಾ 27(DaijiworldNews/ AK): ನೇಜಾರಿನ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿರುವ ಆರೋಪಿ ಪ್ರವೀಣ್ ಚೌಗುಲೆಯನ್ನು ಇಂದು ಪೊಲೀಸ್ ಬಿಗಿ ಭದ್ರತೆಯಲ್ಲಿ ಉಡುಪಿ ಜಿಲ್ಲಾ ಎರಡನೇ ಹೆಚ್ಚುವರಿ ನ್ಯಾಯಲಯಕ್ಕೆ ವಿಚಾರಣೆಗೆ ಹಾಜರು ಪಡಿಸಲಾಯಿತು.
ಈ ಹಿಂದೆ ಮಾರ್ಚ್ 13 ರಂದು ನಿಗದಿಯಾಗಿದ್ದ ಚಾರ್ಜ್ ಪ್ರಕ್ರಿಯೆಯನ್ನು ಆತನ ಅನಾರೋಗ್ಯದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಎರಡನೇ ಹೆಚ್ಚುವರಿ ನ್ಯಾಯಲಯವು ಮಾ.27ಕ್ಕೆ ಮುಂದೂಡಿತ್ತು.
ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದ ಆರೋಪಿಯನ್ನು ಮಾರ್ಚ್ 13 ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಮಲ್ಪೆ ಪೊಲೀಸರಿಗೆ ನಿರ್ದೇಶಿಸಲಾಗಿತ್ತು.
ಅದೇ ಸಂದರ್ಭ ಚೌಗುಲೆಗೆ ಕಿಡ್ನಿ ಸ್ಟೋನ್ ಕಾಣಿಸಿಕೊಂಡಿದ್ದು, ನ್ಯಾಯಾಲಯದ ಆದೇಶದಂತೆ ಚಿಕಿತ್ಸೆ ನೀಡಿ ಬಳಿಕ ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲು ಸಾಧ್ಯವಾಗುತ್ತಿಲ್ಲ ಎಂಬ ಬಗ್ಗೆ ಅಗತ್ಯ ದಾಖಲೆಗಳನ್ನು ಪೊಲೀಸರು ಬುಧವಾರ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ನ್ಯಾಯಾಲಯದ ಆದೇಶದಂತೆ ಚಿಕಿತ್ಸೆ ನೀಡಿ ಬಳಿಕ ಶಸ್ತ್ರಚಿಕಿತ್ಸೆಯ ಬಳಿಕ ಇಂದು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಆರೋಪವನ್ನು ಅಲ್ಲಗಳೆದ ಆರೋಪಿ ಪ್ರವೀಣ್ ಚೌಗುಲೆ:
ನ್ಯಾಯಾಧೀಶ ದಿನೇಶ್ ಹೆಗ್ಡೆ ಆರೋಪಿ ಮೇಲಿನ ಆಪಾದನೆಯನ್ನು ವಾಚಿಸಿದರು. ಆದರೆ ಚೌಗುಲೆ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದಾನೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಈ ಗಂಭೀರ ಪ್ರಕರಣದ ವಿಚಾರಣೆಗೆ ಪೂರ್ವಭಾವಿಯಾಗಿ ಎ.5ರಂದು ಪ್ರಿ ಟ್ರಾಯಲ್ ಕಾನ್ಸರೆನ್ಸ್ ನಡೆಸಲು ಆದೇಶ ನೀಡಿದರು.
ನ್ಯಾಯಾಧೀಶರ ಸಮಕ್ಷಮದಲ್ಲಿ ನಡೆಯುವ ಈ ಕಾನ್ಸರೆನ್ಸ್ನಲ್ಲಿ ಪ್ರಕರಣದ ತನಿಖಾಧಿಕಾರಿ, ವಿಶೇಷ ಪಿಪಿ, ಆರೋಪಿ ಪರ ವಕೀಲರು ಭಾಗವಹಿಸಿ, ಮುಂದಿನ ವಿಚಾರಣೆ ಯಾವ ರೀತಿ ನಡೆಸಬೇಕೆಂಬುದರ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಯಾವ ವಿಚಾರಣೆ ಅಗತ್ಯ ಇದೆ ಎಂಬುದರ ಬಗ್ಗೆ ಈ ಸಭೆಯಲ್ಲಿ ತೀರ್ಮಾನಿಸಿ, ವಿಚಾರಣೆ ಆರಂಭಿಸಲು ಸಾಕ್ಷಿಗಳಿಗೆ ಸಮನ್ಸ್ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.