ಕಾರ್ಕಳ, ಮಾ 27(DaijiworldNews/ AK): ಮಂಗಳೂರಿನ ಬಿರ್ಕನಕಟ್ಟೆಯಿಂದ ಮಾಳ ಎಸ್.ಕೆ.ಬಾರ್ಡರ್ ವರೆಗಿನ ರಾಷ್ಟ್ರೀಯ ಹೆದ್ದಾರಿ-169 ಅಭಿವೃದ್ಧಿ ಕಾಮಗಾರಿಗೆ ಒಂದಲ್ಲ ಒಂದು ರೀತಿಯಲ್ಲಿ ಕಂಟಕಗಳು ಎದುರುಗೊಳ್ಳುತ್ತಿರುವುದರಿಂದಲೇ ಕಾಮಗಾರಿ ಕುಂಠಿತವಾಗಿ ಸಾಗಲು ಕಾರಣವೂ ಆಗಿದೆ.
ಕಾರ್ಕಳದಿಂದ ಎಸ್.ಕೆ ಬಾರ್ಡರ್ ವರೆಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-169ರ ಒಂದು ಪಾಶ್ವದಲ್ಲಿ (ಬಜಗೋಳಿ ಸಮೀಪ) ಕಟ್ಟಡವೊಂದು ರಾಷ್ಟ್ರೀಯ ಹೆದ್ದಾರಿಯನ್ನು ನುಂಗಿದೆಯೋ? ಅಥವಾ ರಾಷ್ಟ್ರೀಯ ಹೆದ್ದಾರಿಯನ್ನು ಕಟ್ಟಡ ನುಂಗಿದೆಯೋ ಅಂತ ಬಾಸವಾಗತೊಡಗುವುದು ಸಹಜ.
ರಾಷ್ಟ್ರೀಯ ಹೆದ್ದಾರಿಯಯೊಳಗೆ ಕಟ್ಟಡ ಇನ್ನು ಉಳಿದುಕೊಂಡಿದ್ದರೂ, ವಿವಾದ ವಿಲೇವಾರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿಭಾಗ ಇನ್ನೂ ಮುಂದಾಗಿಲ್ಲ ಎಂಬಂತೆ ಮೇಲ್ನೋಟಕ್ಕೆ ಕಂಡುಬರುತ್ತದೆ.
ಮಂಗಳೂರು ಸೋಲಾಪುರ ಹೆದ್ದಾರಿ ಮೇಲ್ದಾಜೆಗೆ:
ಮಂಗಳೂರು-ಸೋಲಾಪುರ ನಡುವೆ ಹಾದು ಹೋಗಿದ್ದ ರಾಷ್ಟ್ರೀಯ ಹೆದ್ದಾರಿಯ ಮೇಲ್ದಾರ್ಜೆಗೇರಿಸುವ ಕಾಮಗಾರಿ ಕಳೆದ ಕೆಲ ವರ್ಷಗಳ ಹಿಂದೆ ಆರಂಭಿಸಲಾಗಿತ್ತು.
ಅದೇ ಸಂದರ್ಭದಲ್ಲಿ ಆ ರಸ್ತೆಯನ್ನು 169ಕ್ಕೆ ಬದಲಾಯಿಸಲಾಗಿತ್ತು.ಚತುಷ್ಪಥ ಹೆದ್ದಾರಿಯಾಗಿ ಪರಿವರ್ತನೆಗೆ ಅಗತ್ಯವಾದ ಭೂಸ್ವಾಧೀನ ಪ್ರಕ್ರಿಯೆಗಳು ಅದಕ್ಕೆ ಪೂರಕವಾಗಿ ಪರಿಹಾರ ನೀಡುವ ಸಮರ್ಪಕ ಕಾರ್ಯಗಳು ನಡೆಯದೇ ಹೋದುದರಿಂದ ಸಂತ್ರಸ್ತರು ಹಲವು ಬಾರಿ ಹೋರಾಟದ ಹಾದಿಯನ್ನು ಹಿಡಿದಿದ್ದರು.ಇವೆಲ್ಲವೂ ಹಳೆಯ ವಿಚಾರವೆಂದು ನಿರ್ಲಕ್ಷ್ಯ ಮಾಡುವುದು ತರವಲ್ಲ.ಇಂತಹದೇ ವಿಚಾರವು ಯಥಾವತ್ತಾಗಿ ಮುಂದುವರಿದಿರುವುದರಿಂದ ಕೆಲವೊಂದು ವ್ಯಕ್ತಿ ಇನ್ನೂ ಕೂಡಾ ತಮ್ಮ ಭೂಮಿಗೆ ಯೋಗ್ಯ ಬೆಲೆ ಸಿಗಲಿಲ್ಲ ಎಂಬ ಕಾರಣಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಇನ್ನೂ ಬಿಟ್ಟುಕೊಟ್ಟಿಲ್ಲ.ಅಂತಹ ಕಡೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಅಭಿವೃದ್ಧಿ ಕಾಮಗಾರಿಗೆ ತೊಡಕಾಗಿದೆ ಎಂಬುವುದು ಸ್ವಷ್ಟಗೊಂಡಿದೆ.ಅದರಲ್ಲಿ ಇದು ಒಂದು..
ಬಜಗೋಳಿ ಸಮೀಪದಲ್ಲಿ ರಾಷ್ಟ್ರೀಯ ಹೆದ್ದಾರಿ- 169 ಹೆದ್ದಾರಿ ನಿರ್ಮಾಣ ಕಾಮಗಾರಿ :
ರಾಷ್ಟ್ರೀಯ ಹೆದ್ದಾರಿಯೊಳಗೆ ಕಟ್ಟಡವೊಂದರ ಪಾಶ್ವ ಭಾಗ ಇರುವುದು ಕಾಣಬಹುದು. ಇದೇ ಭಾಗದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದರೂ, ಕಟ್ಟಡ ತೆರವು ವಿವಾದದಿಂದಾಗಿ ವಾಹನ ಓಡಾಟಕ್ಕೂ ಅಡಚಣೆಯಾಗುತ್ತಿದೆ. ಕಟ್ಟಡದ ಸುತ್ತಲು ರಿಬ್ಬನ್ ಕಟ್ಟಿದ್ದರೂ ರಸ್ತೆಯಲ್ಲಿ ಓಡಾಟ ನಡೆಸುವ ಚಾಲಕರಿಗೆ ಮಾತ್ರ ಇದು ಗಮನಕ್ಕೆ ಬಾರದೇ ಹೋಗುತ್ತಿರುವುದು ಅಪಾಯ ಕಟ್ಟಿಟ್ಟ ಬುತ್ತಿ ಎಂದು ವಾಹನ ಸವಾರರ ಅಳಲು.
ರಸ್ತೆಯ ಒಂದು ಪಾರ್ಶ್ವದಲ್ಲಿ ಚರಂಡಿ ವ್ಯವಸ್ಥೆ ಇನ್ನೂ ಆಗಿಲ್ಲ. ಮಳೆಗಾಲ ಸಮೀಪಿಸುತ್ತಿದ್ದು ಪರ್ಯಾಯ ವ್ಯವಸ್ಥೆ ಆಗದೇ ಹೋದಲ್ಲಿ ಮಳೆ ನೀರು ರಾಷ್ಟ್ರೀಯ ಹೆದ್ದಾರಿ -169 ಇದರ ಹೊಸ ರಸ್ತೆ ಮೇಲ್ಭಾಗದಲ್ಲಿ ಶೇಖರಣೆಗೊಳ್ಳಬಹುದು.
ಮಂಗಳೂರು- ಸೋಲಾಪುರ ರಾಷ್ಟ್ರೀಯ ಹೆದ್ದಾರಿಯನ್ನು ಎಸ್.ಕೆ. ಬಾರ್ಡರ್ ತನಕ ಚತುಷ್ಪರ್ಥ ರಸ್ತೆಯನ್ನಾಗಿ ನಿರ್ಮಾಣ ಮಾಡುವ ಯೋಜನೆ ಹಲವು ವರ್ಷಗಳ ಹಿಂದೆ ನಡೆದಿತ್ತು. ಹಂತ ಹಂತವಾಗಿ ಕಾಮಾಗಾರಿ ನಡೆಯುತ್ತಿದ್ದು ಅದಕ್ಕೂ ಮುನ್ನ ನೀಲಿನಕಾಶೆ ಕೂಡಾ ಸಿದ್ಧ ಪಡಿಸಲಾಗಿತ್ತು. ಈ ಎಲ್ಲಾ ಬೆಳವಣಿಗೆಯ ನಡುವೆ ಹೆದ್ದಾರಿಯ ಇಕ್ಕೆಲೆಗಳಲ್ಲಿ ಇದ್ದ ಕೆಲವೊಂದು ಪಾಳು ಬಿದ್ದ ಕಟ್ಟಡಗಳನ್ನು ರಾತ್ರೋರಾತ್ರಿ ಧರೆಗುರುಳಿಸಿ ಅದೇ ಜಾಗದಲ್ಲಿ ಹೆಸರಿಗಷ್ಟೇ ಹೊಸ ಕಟ್ಟಡ ನಿರ್ಮಿಸಿ ಅದರ ಮೇಲ್ಚಾವಣೆಯನ್ನು ಶೀಟ್ ಗಳಿಂದ ನಿರ್ಮಿಸಿ ಹೆದ್ದಾರಿ ಪ್ರಾಧಿಕಾರದಿಂದ ಹೆಚ್ಚುವರಿ ಪರಿಹಾರ ಸಿಗುವ ನಿರೀಕ್ಷೆಯಲ್ಲಿ
ಇದ್ದರು.
ಜಿಲ್ಲಾಡಳಿತ ಮಧ್ಯೆ ಪ್ರವೇಶಕ್ಕೆ ಒತ್ತಾಯ:
ರಾಷ್ಟ್ರೀಯ ಹೆದ್ದಾರಿ-169 ಇದರ ನೂತನ ರಸ್ತೆಯ ಮೇಲೆ ಕಟ್ಟಡ ಒಂದು ಪಾರ್ಶ್ವ ಉಳಿದಿರುವುದರಿಂದ ಒಂದಲ್ಲ ಒಂದು ರೀತಿಯಲ್ಲಿ ಸಮಸ್ಸೆ ಎದುರಾಗುವುದರಿಂದ ಸಮಸ್ಸೆ ಬಗೆಹರಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾಡಳಿತ ಮಧ್ಯೆಪ್ರವೇಶಿಸಲೇ ಬೇಕಾಗಿದೆ ಎಂಬುವುದು ನಾಗರಿಕರ ಆಗ್ರಹವೂ ಆಗಿದೆ.