ಸುಳ್ಯ, ಮಾ. 26(DaijiworldNews/AA): ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಕೋವಿ ಠೇವಣಾತಿ ಇಡುವುದರಿಂದ ಕೃಷಿಕರಿಗೆ ವಿನಾಯಿತಿ ನೀಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ಕೋವಿ ಪರವಾನಗಿದಾರರಾದ ಕೃಷಿಕರ ಹಕ್ಕೊತ್ತಾಯ ಸಭೆ ಸುಳ್ಯ ತಾಲೂಕು ಕಚೇರಿ ಮುಂಭಾಗದಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ನ್ಯಾಯವಾದಿ ಕ್ರಷಿಕ ಯಂ ವೆಂಕಪ್ಪ ಗೌಡ ಅವರು, ಬೆಳೆ ರಕ್ಷಣೆಗೆಂದು ನೀಡಿರುವ ಕೋವಿಗಳನ್ನು ಚುನಾವಣಾ ಸಂದರ್ಭದಲ್ಲಿ ಎರಡು ತಿಂಗಳಿಗೂ ಹೆಚ್ಚು ಸಮಯ ಡಿಪಾಸಿಟ್ ಇಡುವುದರಿಂದ ಕೃಷಿಕರಿಗೆ ಸಮಸ್ಯೆ ಆಗುತ್ತಿದೆ. ರಾತ್ರಿಯ ವೇಳೆಯಲ್ಲಿ ತೋಟಕ್ಕೆ ನೀರು ಹಾಯಿಸುವ ಸಮಯ ತಮ್ಮ ರಕ್ಷಣೆಗೆ ಕೋವಿ ಬೇಕಾಗಿದೆ. ಅಲ್ಲದೆ ಆನೆ, ಚಿರತೆ, ಕಡವೆ, ಕಾಡು ಹಂದಿ ಸೇರಿ ವಿವಿಧ ಕಾಡು ಪ್ರಾಣಿಗಳು ಕೃಷಿ ಹಾನಿ ಮಾಡುತ್ತವೆ. ಈ ಸಂದರ್ಭದಲ್ಲಿ ಶಬ್ದ ಮಾಡಿ ಕಾಡು ಪ್ರಾಣಿಗಳನ್ನು ಓಡಿಸಲು ಬಂದೂಕು ಅತೀ ಅಗತ್ಯವಾಗಿದೆ. ಅಲ್ಲದೆ ಕಾಡಂಚಿನ ಗಡಿ ಗ್ರಾಮಗಳಲ್ಲಿ ನಕ್ಸಲ್ಗಳು ಭೇಟಿ ನೀಡಿರುವುದು ಕೂಡ ಜನರಲ್ಲಿ ಆತಂಕ ಉಂಟಾಗಿದೆ. ಇದರಿಂದ ಜನರಿಗೆ ಧೈರ್ಯಕ್ಕೆ ಬಂದೂಕು ಮನೆಯಲ್ಲಿ ಅನಿವಾರ್ಯವಾಗಿದೆ. ಆದುದರಿಂದ ತಾಲೂಕಿನ ಕೃಷಿಕರಿಗೆ ಕೋವಿ ಡಿಪಾಸಿಟ್ ಮಾಡುವುದರಿಂದ ವಿನಾಯಿತಿ ನೀಡಬೇಕು. ಅಪರಾಧ ಹಿನ್ನಲೆ ಇಲ್ಲದವರಿಗೆ ಕೋವಿ ಠೇವಣಾತಿ ಮಾಡುವುದರಿಂದ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೋವಿ ಪರವಾನಿಗೆ ಹೊಂದಿರುವ ರೈತರು ಉಪಸ್ಥಿತರಿದ್ದರು.