ಬಂಟ್ವಾಳ, ಮೇ01(Daijiworld News/SS): ವಿಕಲಚೇತನೆಯಾದರೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡ 92 ಅಂಕ ಪಡೆದು ಕರಾವಳಿಯ ವಿದ್ಯಾರ್ಥಿನಿಯೊಬ್ಬಳು ಇತರರಿಗೆ ಸ್ಫೂರ್ತಿಯಾಗಿದ್ದಾಳೆ.
ವಾಕ್ ಮತ್ತು ಶ್ರವಣ ಸಮಸ್ಯೆಯನ್ನು ಹೊಂದಿರುವ ಬಂಟ್ವಾಳ ತಾಲೂಕಿನ ಕೆದಿಲ ನಿವಾಸಿ ಯಶಸ್ವಿ ಕೆ. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. 92.16 ಅಂಕ ಗಳಿಸಿ ಸಾಧನೆ ಮಾಡಿದ್ದಾಳೆ. ಮಾತ್ರವಲ್ಲ, ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ.
ಬಂಟ್ವಾಳ ಎಸ್ವಿಎಸ್ ಕಾಲೇಜಿನ ವಿಭಾಗದ ಲ್ಯಾಬ್ ಅಸಿಸ್ಟೆಂಟ್ ತಿಮ್ಮಪ್ಪ ಮೂಲ್ಯ ಕೆ. ಮತ್ತು ಪೆರ್ನೆ ಗ್ರಾಮ ಕಾರ್ಲ ಹಿ.ಪ್ರಾ. ಶಾಲಾ ಶಿಕ್ಷಕಿ ಯಶೋಧಾ ದಂಪತಿಯ ದ್ವಿತೀಯ ಪುತ್ರಿ ಯಶಸ್ವಿ ವಿಕಲಚೇತನೆಯಾದರೂ ಶ್ರಮದಿಂದ ಕಲಿತು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಂಡಿದ್ದಾಳೆ.
ಕಡೇ ಶಿವಾಲಯ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿಯುತ್ತಿರುವ ಈ ವಿದ್ಯಾರ್ಥಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 576 ಅಂಕ ಪಡೆದು ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾಳೆ.
ಉತ್ತಮ ಚೆಸ್ ಪಟು ಆಗಿರುವ ಯಶಸ್ವಿ ಅಂತಾರಾಷ್ಟ್ರೀಯ ಮಟ್ಟದ ವಿಶೇಷ ಚೇತನರ ಚೆಸ್ ಟೂರ್ನಿಯಲ್ಲಿ ಭಾಗವಹಿಸಿ ಕರಾವಳಿಯಲ್ಲಿ ಸುದ್ದಿ ಮಾಡಿದ್ದಳು. ಶ್ರವಣ ಮತ್ತು ವಾಕ್ ಸಮಸ್ಯೆ ಇದ್ದರೂ ಈಕೆ ಪ್ರತಿಭಾನ್ವಿತ ವಿದ್ಯಾರ್ಥಿನಿ. ಈಕೆಯ ತಂದೆ-ತಾಯಿ ಮಗಳಿಗೆ ಮಾತು ಬಾರದಿದ್ದರೂ, ಕಿವಿ ಕೇಳಿಸದಿದ್ದರೂ ವಿಕಲಚೇತನ ಎಂದು ಗ್ರಹಿಸದೆ ಎಲ್ಲಾ ಮಕ್ಕಳಂತೆ ಬೆಳೆಸಿದ ಪರಿಣಾಮ, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದುಕೊಂಡು ಯಶಸವಿ ಎಲ್ಲರಿಗೂ ಮಾದರಿಯಾಗಿದ್ದಾಳೆ.