ಉಳ್ಳಾಲ, ಮಾ 25(DaijiworldNews/AK): ಸೋಮೇಶ್ವರ ಸಮುದ್ರ ತೀರದಲ್ಲಿ ಇಂದು ಕರುಳು ಹಿಂಡುವ ಘಟನೆ ಮಹಿಳೆಯೊಬ್ಬರ ಸಾವು ಸಾಕ್ಷಿಯಾಯಿತು. ಜೀವರಕ್ಷಕರೊಬ್ಬರು ಜೀವದ ಹಂಗು ತೊರೆದು ಒಂದು ಕಿ.ಮೀ ದೂರ ಓಡಿಬಂದು ಮಹಿಳೆಯ ಜೀವರಕ್ಷಿಸಿದರೂ, ಸಕಾಲಕ್ಕೆ ಆಂಬ್ಯುಲೆನ್ಸ್ ಸಿಗದೇ ಒಂದು ಗಂಟೆ ವಿಳಂಬಗೊಂಡಿದ್ದರಿಂದಾಗಿ ಜೀವರರಕ್ಷಕ ರಕ್ಷಿಸಿದ ಮಹಿಳೆಯ ಜೀವ ಆಮ್ಲಜನಕ ಸಿಗದೆ ಮೃತಪಟ್ಟ ದಾರುಣ ಘಟನೆ ನಡೆಯಿತು.
40- 50 ವರ್ಷಗಳ ಮಹಿಳೆಯೊಬ್ಬರು ಸೋಮೇಶ್ವರ ಸಮುದ್ರತೀರದಲ್ಲಿ ಸ್ನಾನ ಮಾಡುತ್ತಿದ್ದಾಗ, ಅಲೆಗಳ ಅಬ್ಬರಕ್ಕೆ ಮಹಿಳೆ ಕಾಲುಜಾರಿ ಸಮುದ್ರದ ಅಲೆಗಳ ನಡುವೆ ಸಿಲುಕಿದ್ದರು. ಸ್ಥಳದಲ್ಲಿದ್ದ ಇತರರು ಬೊಬ್ಬಿಟ್ಟಾಗ, ಮನೆ ಸಮೀಪವೇ ಇದ್ದ ನೂರಾರು ಜೀವ ರಕ್ಷಿಸಿದ ಸೋಮೇಶ್ವರ ಸಮುದ್ರತೀರದ ಜೀವರಕ್ಷಕ ಅಶೋಕ್ ಸೋಮೇಶ್ವರ ತಕ್ಷಣವೇ ಮನೆ ಸಮೀಪದಿಂದ ಓಡಿಬಂದು, ರುದ್ರಪಾದೆಯತ್ತ ಧಾವಿಸಿದ್ದಾರೆ. ಮಹಿಳೆ ಮುಳುಗುವುದನ್ನು ಗಮನಿಸಿ ತಕ್ಷಣವೇ ಸಮುದ್ರಕ್ಕೆ ಜಿಗಿದು ಮಹಿಳೆಯನ್ನು ಹಿಡಿದು ಸಮುದ್ರ ತೀರಕ್ಕೆ ತಂದಿದ್ದು, ಅಲ್ಲಿಂದ ಮತ್ತೆ ದೇವಸ್ಥಾನ ಬಳಿ ಒಬ್ಬರೇ ಮೆಟ್ಟಿಲುಗಳನ್ನು ಹತ್ತಿ ಎತ್ತಿಕೊಂಡು ಬಂದಿದ್ದಾರೆ.
ಮಹಿಳೆ ಜೀವಂತವಿದ್ದರೂ, ಆಮ್ಲಜನಕ ಕೊರತೆಯುಂಟಾಗಿತ್ತು.
ಕೂಡಲೇ ಉಳ್ಳಾಲ ಪೊಲೀಸರು ಹಾಗೂ ಆಂಬ್ಯುಲೆನ್ಸ್ ಗೆ ಕರೆ ಮಾಡಿದ್ದಾರೆ. ಆದರೆ ತಕ್ಷಣಕ್ಕೆ ಸ್ಥಳಕ್ಕೆ ಆಂಬ್ಯುಲೆನ್ಸ್ ವಾಹನ ಹಾಗೂ ಪೊಲೀಸರು ಬಾರದೇ ಒಂದು ಗಂಟೆ ವಿಳಂಬವಾಯಿತು. ಅಷ್ಟರಲ್ಲಿ ಮಹಿಳೆ ಪ್ರಾಣಪಕ್ಷಿ ಹಾರಿಹೋಗಿದೆ. ಸಮುದ್ರ ತೀರದಲ್ಲಿ ಜೀವರಕ್ಷಕರಿದ್ದರೂ, ಜೀವನ ರಕ್ಷಿಸುವ ಸಾಧನಗಳಿಲ್ಲ. ಈ ಬಗ್ಗೆ ಜಿಲ್ಲಾಡಳಿತ ತುರ್ತು ಕ್ರಮಕೈಗೊಳ್ಳಬೇಕಾದ ಅವಶ್ಯಕತೆಯಿದೆ ಅನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.