ಬೈಂದೂರು, ಮಾ 25(DaijiworldNews/AK): ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪಕ್ಷೇತರರಾಗಿ ಸ್ಪರ್ಧಿಸುವುದು ಖಂಡಿತ ಎಂದು ಅವರ ಶಿವಮೊಗ್ಗ ಯುವ ನಾಯಕ ಪೃಥ್ವಿರಾಜ್ ಹೇಳಿದ್ದಾರೆ.
ಚುನಾವಣಾ ಪ್ರಯುಕ್ತ ಬೈಂದೂರು ಕ್ಷೇತ್ರ ಭೇಟಿಗೆ ಆಗಮಿಸಿದ ಅವರು ಸೋಮವಾರ ಬೆಳಿಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿ, ಹಾಲಿ ಸಂಸದ ರಾಘವೇಂದ್ರ ಬೈಂದೂರು ಕ್ಷೇತ್ರಕ್ಕೆ ಕೇಂದ್ರದಿಂದ ತರಬೇಕಾದ ಯಾವ ಅನುದಾನವನ್ನೂ ತಂದಿಲ್ಲ. ಕೇವಲ ನಾಲ್ಕೈದು ಜನರ ಜೊತೆ ಸಂಪರ್ಕ ಹೊಂದಿರುವ ಸಂಸದ ರಾಘವೇಂದ್ರ ಕಾರ್ಯಕರ್ತರ ಕೈಗೆ ಸಿಗುತ್ತಿಲ್ಲ ಎನ್ನುವ ಆರೋಪ ಮೊದಲಿನಿಂದಲೂ ಇದೆ. ಇದೆಲ್ಲದರಿಂದ ಬೇಸರಗೊಂಡಿರುವ ಎಲ್ಲಾ ಕಾರ್ಯಕರ್ತರು ಹಾಗೂ ಸ್ವಯಂಸೇವಕರು ಈಶ್ವರಪ್ಪನವರ ಜೊತೆಗಿದ್ದಾರೆ ಎಂದಿರುವ ಪೃಥ್ವಿರಾಜ್, ಬೈಂದೂರು ಅಭಿವೃದ್ಧಿಯ ಬಗ್ಗೆ ಅವರಿಗಿರುವ ನಿರಾಸಕ್ತಿ ಪ್ರತಿಯೊಬ್ಬರಿಗೂ ಗೊತ್ತಿದೆ. ಹಾಗಾಗಿ ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಈಶ್ವರಪ್ಪ ಗೆದ್ದೇ ಗೆಲ್ತಾರೆ ಎಂದು ಅಭಿಪ್ರಾಯಪಟ್ಟರು.
ನಾವು ಮೋದಿ ವಿರೋಧಿ ಅಲ್ಲ ಎಂದಿರುವ ಪೃಥ್ವೀರಾಜ್, ನಾವು ಮೋದಿಯವರ ಪರವಾಗಿಯೇ ಈ ಬಾರಿಯ ಚುನಾವಣೆಯಲ್ಲಿ ಹೋರಾಟ ನಡೆಸುತ್ತೇವೆ. ಮೋದಿಯವರ ಆದರ್ಶ ನಾಯಕತ್ವಕ್ಕೆ ಈಶ್ವರಪ್ಪ ಜೊತೆಯಾಗಬೇಕು ಎನ್ನುವ ಕಾರಣಕ್ಕೆ ಶಿವಮೊಗ್ಗ ಬೈಂದೂರು ಜನತೆ ಆಶೀರ್ವಾದ ಮಾಡುತ್ತಾರೆ ಎಂದರು.
ಈ ಕ್ಷೇತ್ರದಲ್ಲಿ ಜಾತಿ ಆಧಾರದ ಮೇಲೆ ರಾಜಕೀಯ ನಡೆಯಲ್ಲ ಎಂದು ನಮಗೆ ಗೊತ್ತಿದೆ. ಜನ ವ್ಯಕ್ತಿ ಹಾಗೂ ಹಿಂದುತ್ವವನ್ನು ಬೆಂಬಲಿಸುತ್ತಾರೆ ಎನ್ನುವುದೂ ಗೊತ್ತಿದೆ. ಹಾಗಾಗಿ ಮನೆ ಮನೆ ಭೇಟಿ ಮಾಡಿ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದ ಅವರು, ರಾಘವೇಂದ್ರ ಬೆಂಬಲಿಗರಿಂದ ಈಶ್ವರಪ್ಪ ಪರ ಕಾರ್ಯಕರ್ತರಿಗೆ ಬೆದರಿಕೆ ಹಾಕುತ್ತಿರುವುದು, ಕೇಸು ದಾಖಲಿಸುತ್ತಿರುವ ಬಗ್ಗೆ ಮಾಹಿತಿ ಬರುತ್ತಿದೆ. ಇದೆಲ್ಲಾ ನಡೆಯಲ್ಲಾ. ಯಾವ ಸಂದರ್ಭದಲ್ಲಿಯೂ ನಾವು ಕಾರ್ಯಕರ್ತರ ಜೊತೆಗೆ ನಿಲ್ಲುತ್ತೇವೆ ಎಂದರು. ಈ ಸಂದರ್ಭ ಈಶ್ವರಪ್ಪ ಅವರ ಬೆಂಬಲಿಗರಾದ ಸಚಿನ್ ಹಾಗೂ ಸಂತೋಷ್ ಉಪಸ್ಥಿತರಿದ್ದರು.