ಮಂಗಳೂರು, ಮೇ01(Daijiworld News/SS): ಇತಿಹಾಸ ಪ್ರಸಿದ್ಧ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಮೇ.2 ರಿಂದ 12ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವಕ್ಕೆ ಸಕಲ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಭರವಸೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕದ್ರಿ ದೇಗುಲದ ಬ್ರಹ್ಮಕಲಶೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಸುರಕ್ಷತೆ, ಸ್ವಚ್ಛತೆ ಸಹಿತ ಸಕಲ ವ್ಯವಸ್ಥೆಗಳಿಗೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ದೇವಸ್ಥಾನ ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ಸುಸಜ್ಜಿತ ಹಾಗೂ ಅಭಿವೃದ್ಧಿಗೊಳಿಸಲು ಸೂಚನೆ ನೀಡಲಾಗಿದೆ. ಇದೇ ವೇಳೆ ಬೀದಿ ದೀಪಗಳನ್ನು ಸುವ್ಯವಸ್ಥೆಗೊಳಿಸುವ ಜತೆಗೆ ಮೇ 2 ರಿಂದ 12 ರವರೆಗೆ ಈ ಪ್ರದೇಶದಲ್ಲಿ ವಿದ್ಯುತ್ ನಿಲುಗಡೆ ಮಾಡದಂತೆ ಮೆಸ್ಕಾಂಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಆರೋಗ್ಯ ಇಲಾಖೆ ಮೂಲಕ ವೈದ್ಯಕೀಯ, ಕಿಯೋಸ್ಕ್, ಬೈಕ್ ಆಂಬುಲೆನ್ಸ್, ವೈದ್ಯರನ್ನು ನಿಯೋಜಿಸುವ ಜತೆಗೆ ಅಗತ್ಯ ತುರ್ತು ಔಷಧಿ ಸಂಗ್ರಹಿಸಿಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜನೆ ಜತೆಗೆ ಮಫ್ತಿಯಲ್ಲಿ ಕರ್ತವ್ಯ ನಿರ್ವಹಿಸುವ ಹಾಗೂ ಗುಪ್ತಚರ ಇಲಾಖೆ ಕಣ್ಗಾವಲು ಇರಿಸುವ ಮೂಲಕ ಸುರಕ್ಷತೆ ಖಾತರಿಪಡಿಸಲು ಪೊಲೀಸ್ ಕಮಿಷನರ್ಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದ್ದಾರೆ.
ಪಾರ್ಕಿಂಗ್ ವ್ಯವಸ್ಥೆಗೂ ಸೂಕ್ತ ಬಂದೋಬಸ್ತ್ ಮಾಡಲು ತಿಳಿಸಲಾಗಿದ್ದು, ಆಹಾರ ವಸ್ತುಗಳ ತಪಾಸಣೆ ಜತೆಗೆ ಸ್ವಚ್ಛತೆ ಕಾಪಾಡಲು ತಿಳಿಸಲಾಗಿದೆ ಎಂದು ಖಾದರ್ ಹೇಳಿದರು.