ಮಂಗಳೂರು, ಮಾ 25(DaijiworldNews/AA): ಪಾರ್ಟ್ ಟೈಮ್ ಜಾಬ್ ನೀಡುವುದಾಗಿ ನಂಬಿಸಿ ವಾಟ್ಸ್ಆ್ಯಪ್ ನಲ್ಲಿ ಲಿಂಕ್ ಕಳುಹಿಸಿ ಹಣ ಪಡೆದು ಲಕ್ಷಾಂತರ ರೂ. ವಂಚಿಸಿದ ಆರೋಪಿಯನ್ನು ಮಂಗಳೂರು ನಗರ ಸೆನ್ ಕ್ರೈಂ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜಸ್ಥಾನದ ಜೋಧ್ಪುರ್ ಜಿಲ್ಲೆಯ ಬಾವುರಿಯ ಸದ್ದಾಂ ಗೌರಿ ಬಾವುರಿ (30) ಬಂಧಿತ.
ಆರೋಪಿಯು ದೂರುದಾರಿಗೆ ವಾಟ್ಸ್ಆ್ಯಪ್ ನಲ್ಲಿ ಸಂದೇಶವನ್ನು ಕಳುಹಿಸಿದ್ದು, ಪಾರ್ಟ್ ಟೈಂ ಜಾಬ್ ನ ಲಿಂಕ್ ಕಳುಹಿಸಿ ಲಿಂಕ್ ಮುಖಾಂತರ ಹಣ ತೊಡಗಿಸಲು ತಿಳಿಸಿದ್ದಾನೆ. ಜೊತೆಗೆ ಟಾಸ್ಕ್ ಕಂಪ್ಲೀಟ್ ಮಾಡುವ ಮುಖಾಂತರ ಹಣ ಗಳಿಸಬಹುದು ಎಂದು ದೂರುದಾರರನ್ನು ನಂಬಿಸಿದ್ದಾನೆ. ಆರೋಪಿ ಒಟ್ಟು 1,15,000 ಹಣ ಪಡೆದು ವಂಚನೆ ಮಾಡಿರುವುದಾಗಿ ಸಂತ್ರಸ್ತ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಆರೋಪಿಯನ್ನು ರಾಜಸ್ಥಾನದ ಜೋಧ್ ಪುರ್ ಜಿಲ್ಲೆಯ ಬಾವುರಿಯಿಂದ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿ ಕೃತ್ಯಕ್ಕೆ ಬಳಸಿದ 2 ಮೊಬೈಲ್ ಫೋನ್, 8 ಡೆಬಿಟ್ ಕಾರ್ಡ್ ಗಳು, 4 ಬ್ಯಾಂಕ್ ಚೆಕ್ ಬುಕ್, ಆಧಾರ್ ಕಾರ್ಡ್, ಪಾನ್ ಕಾರ್ಡ್ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ ಅಗರ್ವಾಲ್ ಹಾಗೂ ಡಿ.ಸಿ.ಪಿ ಸಿದ್ಧಾರ್ಥ ಗೊಯಲ್ ಮಾರ್ಗದರ್ಶನದಂತೆ, ಸಿಸಿಆರ್ಬಿ ಘಟಕದ ಎಸಿಪಿ ರವೀಶ್ ನಾಯಕ್ ನೇತೃತ್ವದಲ್ಲಿ, ಮಂಗಳೂರು ನಗರ ಸೆನ್ ಕ್ರೈಂ ಪೊಲೀಸ್ ಠಾಣೆಯ ಠಾಣಾಧಿಕಾರಿ ಶ್ಯಾಮಸುಂದರ್ ಮತ್ತು ಅಧಿಕಾರಿ/ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.