ಮಂಗಳೂರು/ಉಡುಪಿ, ಮಾ 24(DaijiworldNews/AA): ಜಗತ್ತಿನಾದ್ಯಂತ ಇಂದು ಯೇಸು ಕ್ರಿಸ್ತರ ಪುರಪ್ರವೇಶವನ್ನು ನೆನೆದು ಕ್ರೈಸ್ತ ಬಾಂಧವರು ಗರಿಗಳ ಭಾನುವಾರ ಅಥವಾ ಪಾಮ್ ಸಂಡೆಯನ್ನು ಆಚರಿಸಿಸುತ್ತಿದ್ದಾರೆ. ಈ ಆಚರಣೆಯ ಭಾಗವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಅವಳಿ ಜಿಲ್ಲೆಯ ಇಗರ್ಜಿಗಳಲ್ಲಿ ಕ್ರೈಸ್ತಬಾಂಧವರು ಗರಿಗಳ ಭಾನುವಾರವನ್ನು ಭಕ್ತಿಪೂರ್ವಕವಾಗಿ ಆಚರಿಸಿದರು.
ಬಲಿಪೂಜೆಯ ಆರಂಭದ ಮೊದಲು ವಿಶ್ವಾಸಿಗಳು ಸಾಂಕೇತಿಕವಾಗಿ ಸ್ಥಳೀಯ ತೆಂಗಿನ ಗರಿಗಳನ್ನು ಗಾಳಿಯಲ್ಲಿ ಬೀಸುತ್ತಾ 'ಹೊಸಾನ್ನಾ' ಎಂದು ಘೋಷಣೆ ಕೂಗಿ ಚರ್ಚುಗಳ ಒಳಗೆ ಪ್ರವೇಶ ಮಾಡಿದರು. ಮಂಗಳೂರು ನಗರದ ರೊಸಾರಿಯೋ ಚರ್ಚ್ ನಲ್ಲಿ ನಡೆದ ದಿವ್ಯಬಲಿಪೂಜೆಯಲ್ಲಿ ಬಿಷಪ್ ಡಾ. ಪೀಟರ್ ಪೌಲ್ ಸಲ್ಡಾನ ಯೇಸುಕ್ರಿಸ್ತರ ಪುರಪ್ರವೇಶ ಹಾಗೂ ಪಾಮ್ ಸಂಡೇ ಆಚರಣೆಯ ಮಹತ್ವದ ಕುರಿತು ಸಂದೇಶ ನೀಡಿದರು.
ಯೇಸುಕ್ರಿಸ್ತರು ಜೆರುಸಲೇಮಿಗೆ ಪ್ರವೇಶಿಸುವಾಗ ಅಲ್ಲಿನ ನಿವಾಸಿಗಳು, ತಾಳೆಗರಿಗಳನ್ನು ಬೀಸುತ್ತಾ 'ಹೊಸಾನ್ನಾ' ಎಂಬ ಘೋಷಣೆಗಳೊಂದಿಗೆ ಅವರನ್ನು ಸ್ವಾಗತಿಸಿದರು ಎಂಬ ಬೈಬಲಿನ ಉಲ್ಲೇಖದೊಂದಿಗೆ ಗರಿಗಳ ಭಾನುವಾರವನ್ನು ಆಚರಿಸಲಾಗುತ್ತದೆ. ಪಾಮ್ ಸಂಡೇ ಆಚರಣೆಯ ನಂತರ ಯೇಸು ಕ್ರಿಸ್ತರ ಯಾತನೆ ಹಾಗೂ ಮರಣವನ್ನು ಸ್ಮರಿಸುವ ಪವಿತ್ರವಾರವು ಆರಂಭವಾಗುತ್ತದೆ. ವಿಶೇಷ ಪ್ರಾರ್ಥನೆ ಹಾಗೂ ಉಪವಾಸದಿಂದ ಕೂಡಿದ ಈ ವಾರವು ಈಸ್ಟರ್ ಹಬ್ಬದ ಆಚರಣೆಯೊಂದಿಗೆ ಕೊನೆಗೊಳ್ಳುತ್ತದೆ.