ಮಂಗಳೂರು, ಮಾ 23(DaijiworldNews/AA): ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರೊಬ್ಬರು 25 ಲಕ್ಷ ರೂ. ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದ ಘಟನೆ ಶನಿವಾರ ನಡೆದಿದೆ.
ಮುಡಾ ಕಮಿಷನರ್ ಮನ್ಸೂರ್ ಅಲಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಲಂಚ ಪಡೆಯುತ್ತಿದ್ದ ಸಂದರ್ಭ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಆತನ ಜೊತೆಗಿದ್ದ ದಲ್ಲಾಳಿ ಸಲೀಂ ಎಂಬಾತನನ್ನೂ ವಶಕ್ಕೆ ಪಡೆದಿದ್ದಾರೆ.
ಮನೆಗೆ ಟಿಡಿಆರ್ ಅನುಮತಿ ನೀಡುವುದಕ್ಕಾಗಿ 25 ಲಕ್ಷ ಲಂಚಕ್ಕೆ ಕಮಿಷನರ್ ಬೇಡಿಕೆ ಇಟ್ಟಿದ್ದಾನೆ. ಕಮಿಷನರ್ ಡಿಮಾಂಡ್ ಮಾಡಿ ಹಲವು ದಿನಗಳಿಂದ ಒತ್ತಡ ಹಾಕಿ ದಲ್ಲಾಳಿ ಮೂಲಕ ಹಣ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ. ಇನ್ನು ಲೋಕಾಯುಕ್ತ ಡಿವೈಎಸ್ ಪಿ ಚೆಲುವರಾಜ್, ಇನ್ಸ್ಪೆಕ್ಟರ್ ಅಮಾನುಲ್ಲಾ, ಸುರೇಶ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.